24ರಂದು ಕುಶಾಲನಗರದಲ್ಲಿ ಹನುಮ ಜಯಂತಿ

06Kush01 (1)
ಕುಶಾಲನಗರದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ಮಾತನಾಡಿದರು. ಎಂ.ಡಿ.ಕೃಷ್ಣಪ್ಪ, ಕೆ.ಎನ್.ದೇವರಾಜ್, ವಿ.ಪಿ.ಶಶಿಧರ್, ಮಂಜುನಾಥ್ ಗುಂಡೂರಾವ್ ಇದ್ದರು.
Published on

ಕುಶಾಲನಗರ: ಹನುಮ ಜಯಂತಿ ಆಚರಣೆ ಸಂಬಂಧ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ನೇತೃತ್ವದಲ್ಲಿ ಪಟ್ಟಣದ ಖಾಸಗಿ ಹೋಟೆಲ್ನಲ್ಲಿ ಬುಧವಾರ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.

ದಶ ಮಂಟಪಗಳ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ, ಡಿ.24ರಂದು ಜಯಂತಿ ಹಮ್ಮಿಕೊಳ್ಳಲಾಗಿದೆ. ಪಟ್ಟಣದ ವಿವಿಧೆಡೆ ಇರುವ 9 ಮಂಟಪಗಳಿಂದ ಮೆರವಣಿಗೆ ಹೊರಟು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಸಮಾವೇಶಗೊಳ್ಳಲಿವೆ. ಅಲ್ಲದೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮೂಲ ಸ್ಥಾನಕ್ಕೆ ತೆರಳಲಿದೆ ಎಂದು ಮಾಹಿತಿ ನೀಡಿದರು. ಬಳಿಕ ಎಲ್ಲ 9 ಮಂಟಪಗಳ ಪ್ರಮುಖರು ತಮ್ಮ ಮಂಟಪಗಳ ಚಲನವಲನ ಬಗ್ಗೆ ವಿವರಿಸಿದರು.

ಡಿವೈಎಸ್ಪಿ ಗಂಗಾಧರಪ್ಪ ಮಾತನಾಡಿ, ಪಟ್ಟಣದ ಮೂಲಕ 4 ಸಾವಿರ ವಾಹನಗಳು ಸಂಚರಿಸುತ್ತವೆ. ವರ್ಷಾಂತ್ಯ ಆಗಿರುವುದರಿಂದ ವಾಹನ ದಟ್ಟಣೆ ಹೆಚ್ಚಾಗುವ ನಿರೀಕ್ಷೆಯಿದೆ. ಆದ್ದರಿಂದ ಯಾವುದಾದರೂ ಒಂದು ಸ್ಥಳದಿಂದ ಹೊರಟು ಒಂದು ಸ್ಥಳದಲ್ಲಿ ಮೆರವಣಿಗೆ ಕೊನೆಯಾಗಬೇಕು. ಇಲ್ಲವಾದರೆ ಜಾತ್ರಾ ಮೈದಾನದಲ್ಲಿ ಮಂಟಪಗಳ ಪ್ರದರ್ಶನ ಮಾಡಿದರೂ ಉತ್ತಮ ಎಂದರು.

ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಮೆರವಣಿಗೆ ಸಾಗಬೇಕು. ಕಾನೂನು ಮೀರಿ 10 ಗಂಟೆ ನಂತರ ಡಿಜೆ ಹಾಕುವಂತಿಲ್ಲ. ಲೇಸರ್ ಲೈಟ್ ಬಳಸುವಂತಿಲ್ಲ. ಯಾವುದೇ ಕಾರಣಕ್ಕೂ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಪೊಲೀಸರು ಸಿದ್ಧರಿಲ್ಲ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಎಂದು ತಿಳಿ ಹೇಳಿದರು.

ವಾಹನ ಸಂಚಾರ, ಧಾರ್ಮಿಕ ಆಚರಣೆಗೆ ತೊಂದರೆಯಾಗದ ರೀತಿಯಲ್ಲಿ ಕಾರ್ಯಕ್ರಮ ನಡೆಯುವಂತಾಗಲಿ. ಅಲ್ಲದೆ, ಪರಸ್ಪರ ಹೊಂದಾಣಿಕೆಯಿಂದ ಹನುಮ ಜಯಂತಿ ಆಚರಿಸುವಂತಾಗಲಿ ಎಂದು ವಿ.ಪಿ.ಶಶಿಧರ್ ಸಲಹೆ ನೀಡಿದರು.

ದಶ ಮಂಟಪ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎನ್.ದೇವರಾಜ್, ಗ್ರಾಮಾಂತರ ವೃತ್ತ ನಿರೀಕ್ಷಕ ಪ್ರಕಾಶ್, ನಗರ ಸಿಪಿಐ ಕೆ.ರಾಜೇಶ್, ಸಂಚಾರಿ ಠಾಣಾಧಿಕಾರಿ ಕಾಶಿನಾಥ್ ಬಗಲಿ, ಗ್ರಾಮಾಂತರ ಠಾಣಾಧಿಕಾರಿ ಮೋಹನ್, ಪ್ರಮುಖರಾದ ಮಂಜುನಾಥ್ ಗುಂಡೂರಾವ್, ಪುರಸಭಾ ಸದಸ್ಯ ಜಗದೀಶ್, ಡಿ.ವಿ.ರಾಜೇಶ್, ಪ್ರಶಾಂತ್, ಚಂದ್ರು, ವಿಶ್ವ ಗಿರಿ, ವಸಂತ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net