

ಹೊಳೆನರಸೀಪುರ: ಪಟ್ಟಣದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಡಿ.21ರಂದು ಶ್ರೀ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದು, ಇಡೀ ಪಟ್ಟಣ ಕೇಸರಿ ಧ್ವಜ ಹಾಗೂ ಬೆಂಟಿಂಗ್ಸ್‌ನಿಂದ ಸಿಂಗಾರಗೊಂಡಿದೆ.
ಹನುಮ ಜಯಂತಿ ಆಚರಣಾ ಸಮಿತಿ ರಚಿಸಿಕೊಂಡಿರುವ ಪಟ್ಟಣದ ನೂರಾರು ಯುವಕರು, ಹಗಲು-ರಾತ್ರಿ ಎನ್ನದೆ ಪಟ್ಟಣವನ್ನು ಸಿಂಗರಿಸುವ, ಜನರನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆಚರಣಾ ಸಮಿತಿಗೆ ಅಧ್ಯಕ್ಷರು, ಕಾರ್ಯದರ್ಶಿ ಎಂದು ನೇಮಿಸಿಕೊಳ್ಳದೆ ಎಲ್ಲರೂ ಶ್ರದ್ಧೆಯಿಂದ ಹನುಮ ಜಯಂತಿ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ತಾಲೂಕಿನ ಪ್ರತಿ ಹಳ್ಳಿಗೆ ತೆರಳಿ ಭಿತ್ತಿಪತ್ರ ವಿತರಿಸಿ, ಹನುಮ ಜಯಂತ್ಯುತ್ಸವಕ್ಕೆ ಆಹ್ವಾನಿಸಿದ್ದಾರೆ. ಜಾತಿ ಭೇದ, ಪಕ್ಷಪಾತ ಇಲ್ಲದೆ ಶ್ರದ್ಧೆ ಹಾಗೂ ಭಕ್ತಿಯಿಂದ ಆಚರಿಸುತ್ತಿರುವ ಹನುಮ ಜಯಂತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದ್ದಾರೆ. ಜತೆಗೆ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿಕೊಂಡಿರುವ ಸಮಿತಿಯವರು ಸಾವಿರಾರು ಜನರಿಗೆ ಮಾಹಿತಿ ನೀಡುತ್ತಿದ್ದಾರೆ.
ಇದಲ್ಲದೆ ಪ್ರಮೋದ್ ಮುತಾಲಿಕ್, ಚಲನಚಿತ್ರ ನಟ ಗಣೇಶ್ ಸೇರಿದಂತೆ ಅನೇಕ ನಟ, ನಟಿಯರು ಹೊಳೆನರಸೀಪುರದ ಹನುಮಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ಆಹ್ವಾನಿಸಿರುವ ವಿಡಿಯೋ ತುಣುಕುಗಳನ್ನು ಸಾಮಾಜಿಕ ತಾಣಗಳ ಗ್ರೂಪ್‌ಗಳಲ್ಲಿ ಹರಿಬಿಟ್ಟಿದ್ದಾರೆ.
ಡಿ.21ರಂದು ಬೆಳಗ್ಗೆ 9 ಗಂಟೆಯಿಂದ ಪಟ್ಟಣದ ನರಸಿಂಹಸ್ವಾಮಿ ದೇವಸ್ಥಾನ ಸಮೀಪದಿಂದ ಅಲಂಕೃತ ವಾಹನದಲ್ಲಿ ಹನುಮನನ್ನು ಕೂರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತಿದೆ. ಮಧ್ಯಾಹ್ನ ಉತ್ಸವದಲ್ಲಿ ಭಾಗವಹಿಸುವವವರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ
. ಹನುಮ ಜಯಂತಿ ಉತ್ಸವ ಹಾಗೂ ಮೆರವಣಿಗೆಯಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಆಚರಣಾ ಸಮಿತಿ ಪ್ರಕಟಣೆ ತಿಳಿಸಿದೆ.