ಪಿರಿಯಾಪಟ್ಟಣದಲ್ಲಿ ವಿಜೃಂಭಣೆಯ ಹನುಮ ಜಯಂತಿ

ಹನುಮ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಪಿರಿಯಾಪಟ್ಟಣದಲ್ಲಿ ಆಯೋಜಿಸಿದ್ದ ಮೆರವಣಿಗೆಗೆ ರಾವಂದೂರಿನ ಮುರುಘ ಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ಚಾಲನೆ ನೀಡಿದರು.
ಹನುಮ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಪಿರಿಯಾಪಟ್ಟಣದಲ್ಲಿ ಆಯೋಜಿಸಿದ್ದ ಮೆರವಣಿಗೆಗೆ ರಾವಂದೂರಿನ ಮುರುಘ ಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ಚಾಲನೆ ನೀಡಿದರು.
Published on

ಪಿರಿಯಾಪಟ್ಟಣ:  ಪಟ್ಟಣದಲ್ಲಿ ಶನಿವಾರ 7ನೇ ವರ್ಷದ ಹನುಮ ಜಯಂತಿ ವಿಜೃಂಭಣೆಯಿಂದ ನಡೆಯಿತು.

ಪಟ್ಟಣದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿನ ಆಂಜನೇಯ ಮೂರ್ತಿಗೆ ಭಕ್ತರು ಮುಂಜಾನೆಯಿಂದಲೇ ವಿವಿಧ ಅಭಿಷೇಕ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸಿದರು. ನಂತರ ಗಣಪತಿ ಹೋಮ ಪೂಜೆ ನೆರೆವೇರಿಸಲಾಯಿತು.

ಹನುಮ ಜಯಂತಿ ಆಚರಣೆ ಸಮಿತಿ ಸದಸ್ಯರ ಸಮ್ಮುಖದಲ್ಲಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ದೇವಾಲಯದ ಮುಂಭಾಗದಿಂದ ವಿಶೇಷ ಅಲಂಕೃತ ವಾಹನದಲ್ಲಿ ಹನುಮನ ಮೂರ್ತಿಯನ್ನು ಕೂರಿಸಲಾಯಿತು. ಕಲಾತಂಡ, ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆ ಆರಂಭವಾಯಿತು.

ರಾವಂದೂರಿನ ಮುರುಘ ಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ, ತಾಲೂಕು ಬಿಜೆಪಿ ಅಧ್ಯಕ್ಷ ವಿ.ರಾಜೇಂದ್ರ ಮೆರವಣಿಗೆಯಲ್ಲಿದ್ದ ಹನುಮಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಕೆ.ಮಹದೇವ್, ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ನಿರ್ಗಮಿಸಿದರು.

ಕಲಾತಂಡಗಳು ಮತ್ತು ಡಿಜೆ ವಾದ್ಯದೊಂದಿಗೆ ಪ್ರಾರಂಭಗೊಂಡ ಮೆರವಣಿಗೆ ಪಟ್ಟಣದ ಒಳಕೋಟೆ, ವೈದ್ಯೇಶ್ವರ ಬಡಾವಣೆ, ಉಪ್ಪಾರಗೇರಿ ರಸ್ತೆಗಳಲ್ಲಿ ಸಂಚರಿಸಿ ಪಟ್ಟಣದ ಎಪಿಎಂಸಿ ಬಳಿ ಬಿ.ಎಂ.ರಸ್ತೆಗೆ ಪ್ರವೇಶಿಸಿತು. ಬಿ.ಎಂ.ರಸ್ತೆಯಲ್ಲಿ ಸಂತೆಪೇಟೆ, ಬಸವೇಶ್ವರ ವೃತ್ತ, ಬಸ್ ನಿಲ್ದಾಣದವರೆಗೆ ಸಾಗಿದ ಮೆರವಣಿಗೆ ಬಳಿಕ ನೆಹರು ರಸ್ತೆ, ದೊಡ್ಡ ಬೀದಿ, ನುಗ್ಗೆಹಳ್ಳಿ ಬೀದಿ, ಕಾನ್ವೆಂಟ್ ರಸ್ತೆ ಮೂಲಕ ಗೋಣಿಕೊಪ್ಪ ರಸ್ತೆಯಲ್ಲಿರುವ ಜೂನಿಯರ್ ಕಾಲೇಜಿನ ಮೈದಾನ ತಲುಪಿ ಮೆರವಣಿಗೆ ಸಮಾಪ್ತಿಗೊಂಡಿತು.

ಮೆರವಣಿಗೆಯುದ್ದಕ್ಕೂ ಡಿಜೆ ತಾಳಕ್ಕೆ ಹೆಜ್ಜೆ ಹಾಕಿದ ಯುವಕರ ನೃತ್ಯ ಗಮನ ಸೆಳೆಯಿತು. ವಿಶೇಷ ಅಲಂಕೃತ ವಾಹನದಲ್ಲಿದ್ದ ಹನುಮನಮೂರ್ತಿಗೆ ಹಲೆವೆಡೆ ಭಕ್ತರು ಹಣ್ಣು ಕಾಯಿ ಪೂಜೆ ಸಲ್ಲಿಸಿದರು. ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ, ಬಿಜೆಪಿ ಮುಖಂಡ ಪಿ.ಪ್ರಶಾಂತ್ ಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ವಿ.ರಾಜೇಂದ್ರ, ಹನುಮ ಜಯಂತಿ ಆಚರಣೆ ಸಮಿತಿಯ ಗೌರವಾಧ್ಯಕ್ಷ ಪ್ರಸಾದ್ ಮತ್ತಿತರ ಮುಖಂಡರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಡಿವೈಎಸ್ಪಿ ಗೋಪಾಲಕೃಷ್ಣ, ಪೊಲೀಸ್ ವೃತ ನಿರೀಕ್ಷಕ ಗೋವಿಂದರಾಜು, ದೀಪಕ್, ಮುನಿಯಪ್ಪ, ಕಶ್ಯಪ್ ಸೇರಿದಂತೆ 150ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದರು. ಬಿ.ಎಂ.ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ತಡೆಗಟ್ಟಲು ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿತ್ತು. ಇದರಿಂದಾಗಿ ಪಟ್ಟಣದ ಕನ್ನಂಬಾಡಿ ದೇವಸ್ಥಾನದವರೆಗೂ ವಾಹನಗಳ ದಟ್ಟಣೆ ಇದ್ದಿದ್ದರಿಂದ ವಾಹನಗಳ ಸವಾರರು ಪರದಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net