

ಗುಂಡ್ಲುಪೇಟೆ: ತಾಲೂಕಿನ ಬೇಗೂರು ಗ್ರಾಮದಲ್ಲಿ ಶನಿವಾರ ಹನುಮಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಗ್ರಾಮದ ಕಮರಹಳ್ಳಿ ರಸ್ತೆಯ ಬಂಡಿಗೆರೆ ಮಹದೇಶ್ವರ ದೇವಾಲಯದಿಂದ ಹೊರಟ ಮೆರವಣಿಗೆ ನಂದಿಧ್ವಜ, ಜನಪದ ಕಲಾತಂಡಗಳು, ಬ್ಯಾಂಡ್, ಮಂಗಳವಾದ್ಯಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಸಾಗಿತು. ಅಲಂಕೃತ ವಾಹನಗಳ ಮೇಲೆ ಶ್ರೀರಾಮ ಹಾಗೂ ಆಂಜನೇಯನ ಭಾವಚಿತ್ರಗಳನ್ನು ಇರಿಸಿ ಮೆರವಣಿಗೆ ಮಾಡಲಾಯಿತು.
ಪ್ರತಿಯೊಂದು ಮನೆಯವರು ಹಾಗೂ ಅಂಗಡಿಗಳ ಮಾಲೀಕರು ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ತಮ್ಮ ಭಕ್ತಿಭಾವ ಮೆರೆದರು. ಈ ಸಂದರ್ಭದಲ್ಲಿ ಗ್ರಾಮದ ಯುವಕರು, ಅಕ್ಕಪಕ್ಕದ ಗ್ರಾಮಗಳ ಭಕ್ತರು, ಹಿಂದೂ ಸಂಘಟನೆಯ ಸದಸ್ಯರು ಇದ್ದರು.
ಬೇಗೂರು ಠಾಣೆಯ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದರು.