

ಶನಿವಾರಸಂತೆ: ಇಲ್ಲಿನ ಶ್ರೀರಾಮ ಮಂದಿರದಲ್ಲಿ ಶುಕ್ರವಾರ ಸಂಜೆ ಹನುಮ ಜಯಂತಿಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.
ಶ್ರೀರಾಮ ಮಂದಿರದಲ್ಲಿರುವ ರಾಮಚಂದ್ರ, ಸೀತಾಲಕ್ಷ್ಮೀ, ಲಕ್ಷ್ಮಣ ಹಾಗೂ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ಪೂಜಾ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಸಂಜೆ 6.30ಕ್ಕೆ ಆಂಜನೇಯಸ್ವಾಮಿಗೆ ಹೋಮ ನೆರವೇರಿಸಲಾಯಿತು. ನಂತರ ಪೂರ್ಣಾಹುತಿ, ಮಹಾ ಮಂಗಳಾರತಿ ತೀರ್ಥಪ್ರಸಾದ ವಿನಿಯೋಗದೊಂದಿಗೆ ಪೂಜಾ ಕಾರ್ಯವು ಸಂಪನ್ನಗೊಂಡಿತು.
ಹನುಮ ಜಯಂತಿ ಪ್ರಯುಕ್ತ ನಡೆದ ಪೂಜಾ ಮಹೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಅರ್ಚಕ ಪ್ರಸನ್ನ ಭಟ್ ಮತ್ತು ತಂಡದವರಿಂದ ಪೂಜಾ ವಿಧಿ ವಿಧಾನ ನೆರವೇರಿತು. ದೇವಸ್ಥಾನ ಸಮಿತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.