ಭಗವಂತನ ಪಾರಮ್ಯ ಮೆರೆದ ಶ್ರೇಷ್ಠಿಗ ಆಂಜನೇಯ...

Hanuma Jayanthi
Published on

ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ

ಹನುಮ ಜಯಂತಿ, ಗೀತಾ ಸ್ಪರ್ಧೆ ವಿಜೇತರಿಗೆ ಪುರಸ್ಕಾರ

ವಿಜಯವಾಣಿ ಸುದ್ದಿಜಾಲ ಉಡುಪಿ

ಭಗವದ್ಗೀತೆಯನ್ನು ಅರ್ಜುನನಿಗಷ್ಟೇ ಕೃಷ್ಣ ಉಪದೇಶ ಮಾಡಿರಲಿಲ್ಲ. ಆತನ ರಥದ ಧ್ವಜದಲ್ಲಿ ಕುಳಿತಿದ್ದ ಆಂಜನೇಯನಿಗೂ ಉಪದೇಶ ಮಾಡಿದ್ದನು. ಅದನ್ನು ಚಾಚೂತಪ್ಪದೆ ಪರಿಪಾಲಿಸಿದ, ಭಗವಂತನ ಪಾರಮ್ಯ, ಆಶಯ, ಆದರ್ಶಕ್ಕೆ ಚ್ಯುತಿ ಬಾರದಂತೆ, ಕರ್ತವ್ಯ ಪ್ರಜ್ಞೆ ಮೆರೆದ ಪರಿಪೂರ್ಣನಾದ ಶ್ರೇಷ್ಠ ಭಕ್ತ ಆಂಜನೇಯನಾಗಿದ್ದಾನೆ ಎಂದು ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಏ.12ರಂದು ಆಯೋಜಿಸಿದ್ದ ಹನುಮ ಜಯಂತಿ ಹಾಗೂ ಇತ್ತೀಚೆಗೆ ನಡೆದಿದ್ದ ಜಾಗತಿಕ ಮಟ್ಟದ ಭಗವದ್ಗೀತಾ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಹನುಮಂತನ ಶ್ರೇಷ್ಠತೆಯ ಕುರಿತು ವಿವರವಾಗಿ ತಿಳಿಸಿದರು.

ಅರ್ಜುನನಿಗೆ ಹನುಮ ಬಲ

ಭಂಡಾರಕೇರಿ ಮಠದ ವಿದ್ಯೇಶ ತೀರ್ಥ ಶ್ರೀಪಾದರು ಮಾತನಾಡಿ, ಹನುಮಂತನು ಜಯವನ್ನು ತಂದುಕೊಡುವಂತಹ ದೇವರು. ಹೀಗಾಗಿಯೇ ಅರ್ಜುನನಿಗೆ ಎಂದಿಗೂ ಸೋಲೇ ಬರಲಿಲ್ಲ. ಏಕೆಂದರೆ, ಆತನ ರಥದಲ್ಲಿ ಜಯಧ್ವಜವಿತ್ತು. ಆ ಧ್ವಜದಲ್ಲಿ ಹನುಮನೇ ಕುಳಿತಿದ್ದ. ಹನುಮನಿಗೆ ಜಯ ಎಂಬ ಹೆಸರೂ ಇದೆ. ಹನುಮ-ಕೃಷ್ಣನ ಕೃಪೆಯಿಂದ ಎಲ್ಲ ಯುದ್ಧಗಳಲ್ಲೂ ಜಯ ಸಾಧಿಸಿದ ಅರ್ಜುನನು ವಿಜಯ ಎಂಬ ಹೆಸರಿನಿಂದಲೂ ಪ್ರಸಿದ್ಧನಾಗಿದ್ದಾನೆ ಎಂದರು.

ಜೀವನದ 'ಉತ್ತರ' ಗೀತೆ

ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಸ್​. ಅಹಲ್ಯಾ ಮಾತನಾಡಿ, ಭಾರತದ ಸಾಹಿತ್ಯ, ಜ್ಞಾನ ಪರಂಪರೆಯ ವಿಭಾಗದಲ್ಲಿ ಭಗವದ್ಗೀತೆಗೆ ಹೆಚ್ಚಿನ ಪ್ರಾಶಸ್ತ್ಯ, ಜನಮನ್ನಣೆ ಲಭಿಸಿದೆ. ಎಲ್ಲ ವೇದಾಂತಗಳ ಸಾರ ಹೊಂದಿದ್ದು, ಇದು ಕೃಷ್ಣ ಸಪ್ತಶತಿಯಾಗಿದೆ. ಭಗವದ್ಗೀತೆಯು ಶಾಸ್ತ್ರದ ನಿಷ್ಕರ್ಷ, ಕಾವ್ಯದ ಸೌಲಭ್ಯ ಎರಡನ್ನೂ ಒಳಗೊಂಡ ವಿಶಿಷ್ಟ ಪ್ರಕಾರವಾಗಿದೆ. ಹೀಗಾಗಿ ಗೀತೆಯನ್ನು ಶಾಸ್ತ್ರಕಾವ್ಯವಾಗಿಯೂ ನೋಡಬಹುದಾಗಿದೆ. ಜೀವನದಲ್ಲಿ ಎದುರಾಗುವ ಎಲ್ಲ ಬಗೆಯ ಸಮಸ್ಯೆ, ಕಷ್ಟ-ನಷ್ಟಗಳಿಗೂ ಗೀತೆಯಲ್ಲಿ ಉತ್ತರವಿದೆ ಎಂದರು.

ಪುಸ್ತಕ ಬಿಡುಗಡೆ

ಲೋಕ ಶಿಕ್ಷಣ ಟ್ರಸ್ಟ್​ ಮೂಲಕ ಈ ಹಿಂದೆ ಮುದ್ರಣಗೊಂಡಿದ್ದ ಹಾಗೂ ಪುತ್ತಿಗೆ ಮಠದಿಂದ ಮರು ಮುದ್ರಣಗೊಂಡ ಓಂ ಪ್ರಕಾಶ ಭಟ್​ ಸಂಪಾದಕತ್ವದ ರಾಮಾಯಣ ರಹಸ್ಯ-ಸ್ವಾರಸ್ಯ ಪುಸ್ತಕವನ್ನು ಭಂಡಾರಕೇರಿ ಮಠದ ವಿದ್ಯೇಶ ತೀರ್ಥ ಶ್ರೀಪಾದರು ಬಿಡುಗಡೆ ಮಾಡಿದರು.

ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಉದ್ಯಮಿ ಭುವನೇಂದ್ರ ಕಿದಿಯೂರು, ಸುಂದರಕಾಂಡ ಪಾರಾಯಣ ಪ್ರವಚನ ನಡೆಸಿಕೊಟ್ಟ ಶತಾವಧಾನಿ ಡಾ. ರಾಮನಾಥ ಆಚಾರ್ಯ, ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ, ರಮೇಶ ಭಟ್​, ಮಹಿತೋಷ ಆಚಾರ್ಯ, ರತೀಶ ತಂತ್ರಿ ಉಪಸ್ಥಿತರಿದ್ದರು.

ವಿದ್ವಾನ್​ ಡಾ. ಬಿ.ಗೊಪಾಲ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ವಿನಯಕುಮಾರ, ಪಾಯೋಜ್​ಗೆ ಪ್ರಥಮ ಸ್ಥಾನ

ಜಾಗತಿಕ ಮಟ್ಟದ ಭಗವದ್ಗೀತಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಹಾಗೂ ಪ್ರಥಮ 1 ಲಕ್ಷ ರೂ., ದ್ವಿತೀಯ 75 ಸಾವಿರ ರೂ., ತೃತೀಯ 50 ಸಾವಿರ ರೂ. ಹಾಗೂ ಚತುರ್ಥ 25 ಸಾವಿರ ರೂ. ಬಹುಮಾನ ವಿತರಿಸಲಾಯಿತು. ಹಿರಿಯ ವಿಭಾಗದಲ್ಲಿ ವಿನಯಕುಮಾರ ಸುರತ್ಕಲ್​ ಮಂಗಳೂರು (ಪ್ರ), ಸುಮಿತ್​ ಪ್ರಲ್ಹಾದ ಚನ್ನರಾಯಪಟ್ಟಣ (ದ್ವಿ), ಅನಿಲಕುಮಾರ ಚಿಂತಾಮಣಿ (ತೃ) ಹಾಗೂ ಸೌಮ್ಯಾ ಸಿ.ಎಸ್​. ಮಂಗಳೂರು ಮತ್ತು ಲಕ್ಷ್ಮೀ ಸತೀಶ ಬೆಂಗಳೂರು 4ನೇ ಬಹುಮಾನ ಪಡೆದರು. ಕಿರಿಯ ಶ್ರೇಣಿಯಲ್ಲಿ ಪಾಯೋಜ್​ ಕಂಬಳೂರು ಬೆಂಗಳೂರು (ಪ್ರ), ಮಯಾಂಕ ಭಟ್​ ಬೆಂಗಳೂರು (ದ್ವಿ), ಅವಾ ತಮಂಗ್​ ಪಶ್ಚಿಮ ಬಂಗಾಲ (ತೃ), ಶ್ರೀಪಾಲ ಹೊಸಬೆಟ್ಟು ಮಂಗಳೂರು 4ನೇ ಸ್ಥಾನದ ಬಹುಮಾನ ಸ್ವೀಕರಿಸಿದರು.

ಹನುಮಂತನು ಭಗವದ್ಗೀತೆಯ ಜೀವಂತ ವ್ಯಾಖ್ಯಾನವಾಗಿದ್ದಾನೆ. ಗೀತೆಯಲ್ಲಿ ಹೇಳಿದ ಎಲ್ಲ ತತ್ತ್ವಗಳನ್ನು ಪ್ರತ್ಯಕ್ಷವಾಗಿ ತ್ರೇತಾಯುಗ, ದ್ವಾಪರ ಯುಗ ಎರಡರಲ್ಲೂ ತೋರಿಸಿದ ಮಹಾಮಹಿಮ ಹನುಮ. ಆತನ ಜಯಂತಿಯ ದಿನದಂದೇ ಗೀತಾ ಸ್ಪರ್ಧೆ ವಿಜೇತರಿಗೆ ಪಾರಿತೋಷಕ ನೀಡುತ್ತಿದ್ದೇವೆ. | ಸುಗುಣೇಂದ್ರ ಶ್ರೀ. ಪುತ್ತಿಗೆ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net