

ಮಂಡ್ಯ: ತಾಲೂಕಿನ ಗಂಟಗೌಡನಹಳ್ಳಿ ಗ್ರಾಮದಲ್ಲಿ ಶ್ರೀರಾಮನವಮಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಅಂತೆಯೇ ವೀರಾಂಜನೇಯಸ್ವಾಮಿಯ 21 ಅಡಿ ಎತ್ತರದ ವಿಗ್ರಹವನ್ನು ಲೋಕಾರ್ಪಣೆಗೊಳಿಸಲಾಯಿತು.
ಮಂಡ್ಯ-ನಾಗಮಂಗಲ ರಸ್ತೆಯ ಗಂಟಗೌಡನಹಳ್ಳಿ-ಉಪ್ಪರಕನಹಳ್ಳಿ ಗೇಟ್ ಬಳಿ ನಿರ್ಮಿಸಲಾಗಿರುವ ಆಂಜನೇಯ ಸ್ವಾಮಿಯ ಲೋಕಾರ್ಪಣೆ ಹಾಗೂ ಹಬ್ಬದ ಅಂಗವಾಗಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಆಂಜನೇಯ ಸ್ವಾಮಿಗೆ ಪಂಚಾಮೃತ ಸಹಿತ ಕುಂಭಾಭಿಷೇಕ, ಪೂರ್ಣಾಹುತಿ, ಅಷ್ಟೋತ್ತರ ಶತನಾಮಾವಳಿ, ಮಹಾ ನೈವೇದ್ಯ, ಮಹಾಮಂಗಳಾರತಿ ಸೇರಿದಂತೆ ಧಾರ್ಮಿಕ ಕೈಂಕರ್ಯ ನೆರವೇರಿದವು.
ಕಾರ್ಯಕ್ರಮದ ಅಂಗವಾಗಿ ಶನಿವಾರದಿಂದಲೇ ವಿವಿಧ ಪೂಕೆ, ಹೋಮ ನಡೆಸಲಾಗಿತ್ತು. ರಾತ್ರಿ ಗಂಟಗೌಡನಹಳ್ಳಿಯ ಬಸವೇಶ್ವರಸ್ವಾಮಿ ಹಾಗೂ ಆಂಜನೇಯ ಸ್ವಾಮಿಯ ಉತ್ಸವಮೂರ್ತಿ ಮೆರವಣಿಗೆ ಮಾಡಲಾಯಿತು. ತೀರ್ಥ ಸಂಗ್ರಹಣೆ, ಗೋ ಪೂಜೆ, ಮಹಾ ಸಂಕಲ್ಪ, ರಕ್ಷಾ ಬಂಧನ, ಗೃಹಪೂಜೆ, ಮಹಾ ಮೃತ್ಯುಂಜಯ ಪೂಜೆ, ಪಂಚಬ್ರಹ್ಮ ಪೂಜೆ, ಸೀತಾರಾಮ ಕಳಸ ಪೂಜೆ ಹಾಗೂ ಪ್ರಧಾನ ಶಕ್ತಿ ಪವಮಾನ ಕಳಸ ಪೂಜೆ ನೆರವೇರಿಸಲಾಯಿತು. ಗ್ರಾಮದ ಪ್ರತಿ ಮನೆಯಿಂದಲೂ ಕಜ್ಜಾಯ ಪ್ರಸಾದವನ್ನು ಸಂಗ್ರಹಿಸಿ ಮೆರವಣಿಗೆ ತಂದು ದೇವರಿಗೆ ಸಮರ್ಪಣೆ ಮಾಡಲಾಯಿತು. ಇಡೀ ದೇವಸ್ಥಾನವನ್ನು ವಿವಿಧ ಬಗೆ ಹೂವುಗಳು ಹಾಗೂ ವಿದ್ಯುತ್ ದೀಪ, ತಳಿರು ತೋರಣಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ಭಕ್ತರು ಆಂಜನೇಯ ಸ್ವಾಮಿಗೆ ತುಂಬಿಟ್ಟಿನ ಆರತಿ, ತುಪ್ಪದ ಆರತಿ ಸೇರಿದಂತೆ ವಿವಿಧ ಆರತಿ ಸೇವೆ ಸಲ್ಲಿಸಿದರು. ವೇದಬ್ರಹ್ಮ ಸುದೀಪರಾಧ್ಯ ಮತ್ತವರ ತಂಡದವರು ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. 3000ಕ್ಕೂ ಹೆಚ್ಚು ಭಕ್ತರಿಗೆ ಕಜ್ಜಾಯ, ಬಾಳೆಹಣ್ಣು, ಪಾಯಸ, ಅನ್ನ ಸಾಂಬಾರ್ ಅನ್ನು ಪ್ರಸಾದವಾಗಿ ನೀಡಲಾಯಿತು.
ದೇವರ ದರ್ಶನ ಪಡೆದ ಶಾಸಕ ರವಿಕುಮಾರ್ ಗಣಿಗ, ದೇವಸ್ಥಾನದ ನೆಲಹಾಸು ಹಾಗೂ ಶೆಲ್ಟರ್ ನಿರ್ಮಾಣಕ್ಕೆ 5 ಲಕ್ಷ ರೂ ನೆರವು ನೀಡುವುದಾಗಿ ಘೋಷಿಸಿದರು. ಅಂತೆಯೇ ಗ್ರಾಮಸ್ಥರು ಗಂಟಗೌಡನಹಳ್ಳಿ ಗೇಟ್‌ನ ಬಸ್ ನಿಲ್ದಾಣದಲ್ಲಿ ಮಿನಿ ಐ ಮಾಕ್ಸ್ ಲೈಟ್ ಅಳವಡಿಸಿಕೊಡುವಂತೆ ಗ್ರಾಮಸ್ಥರ ಮಾಡಿದ ಮನವಿಗೆ ಸ್ಪಂದಿಸಿದರು.