

ಮಂಡ್ಯ: ತಾಲೂಕಿನ ಕೆರಗೋಡು ಗ್ರಾಮದಲ್ಲಿ ರಂಗಮೈದಾನದಲ್ಲಿ ನಿರ್ಮಿಸಲಾಗಿದ್ದ 108 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಹಾರಿಸಲಾಗಿದ್ದ ಹನುಮಾನ್ ಧ್ವಜವನ್ನು ತೆರವು ಮಾಡಿದ ಬೆನ್ನಲ್ಲೇ ಗ್ರಾಮದ ಪ್ರತಿ ಮನೆ ಮನೆಯ ಮೇಲೂ ಹನುಮಧ್ವಜ ಹಾರಿಸುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಹನುಮಧ್ವಜ ಹಾರಿಸುವ ಅಭಿಯಾನಕ್ಕೆ ಚಾಲನೆ ನೀಡಿದ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಜಿಲ್ಲಾಡಳಿತ ಮತ್ತು ರಾಜ್ಯಸರ್ಕಾರ ಕೆರಗೋಡು ಗ್ರಾಮದಲ್ಲಿ ಹನುಮಾನ್ ಧ್ವಜವನ್ನು ಇಳಿಸುವ ಮೂಲಕ ಜನರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಿದೆ. ಅವರು ಒಂದು ಧ್ವಜವನ್ನು ಇಳಿಸಿರಬಹುದು. ನಾವು ಮನೆ ಮನೆಗೂ ಧ್ವಜ ಹಾರಿಸುವ ಕೆಲಸ ಮಾಡುತ್ತೇವೆ. ಅವರಿಗೆ ತಾಕತ್ತಿದ್ದರೆ ಬಂದು ತಡೆಯಲಿ ಎಂದು ಸವಾಲು ಹಾಕಿದರು.
ಹನುಮಾನ್ ಧ್ವಜ ಹಾರಿಸುವುದು ಕೇವಲ ಕೆರಗೋಡು ಗ್ರಾಮಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಇದು ಜಿಲ್ಲಾದ್ಯಂತ ವಿಸ್ತರಿಸುತ್ತೇವೆ. ಜಿಲ್ಲೆಯ ಎಲ್ಲ ಗ್ರಾಮಗಳಲ್ಲೂ ಮನೆ ಮನೆ ಮೇಲೆ ಹನುಮಾನ್ ಧ್ವಜ ಹಾರಿಸುತ್ತೇವೆ. ಅಭಿಯಾನ ಮಾಡಲು ಮನೆ ಮನೆ ಬಾಗಿಲಿಗೆ ಹೋದ ವೇಳೆ ಜನರು ನಮ್ಮನ್ನು ಸ್ವಾಗತಿಸಿ ಅವರೇ ಹನುಮಾನ್ ಧ್ವಜವನ್ನು ಪಡೆದು ತಮ್ಮ ಮನೆಗಳ ಮೇಲೆ ಖುಷಿಯಿಂದಲೇ ಹಾರಿಸುವಂತಹ ಪ್ರಯತ್ನ ಮಾಡುತ್ತಿದ್ದಾರೆ. ನಾವು ಯಾರಿಗೂ ಬಲವಂತ ಮಾಡುತ್ತಿಲ್ಲ. ರಾಜ್ಯಸರ್ಕಾರ ಜನರ ಭಾವನೆಗಳ ಮೇಲೆ ಆಟವಾಡುತ್ತಿದೆ. ಜನರ ಆಸೆಗಳಿಗೆ ಮಣ್ಣೆರಚುವ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ಹಿಂದಿನಿಂದಲೂ ಇಂತಹುದ್ದೇ ಕೆಲಸ ಮಾಡುತ್ತಿದೆ. ಈಗ ಜಿಲ್ಲಾದ್ಯಂತ ಹನುಮಧ್ವಜ ಹಾರಿಸುತ್ತೇವೆ. ಬಂದು ತಡೆಯಲಿ ಎಂದರು.
ಬಿಜೆಪಿ ಮುಖಂಡರಾದ ಕೆರಗೋಡು ಮಹೇಶ್, ವಿವೇಕ್, ಹೊಳಲು ಮನುಕುಮಾರ್, ವಿನೋಭ, ಎಸ್.ಶಿವಕುಮಾರ್ ಆರಾಧ್ಯ ಇತರರಿದ್ದರು.