ಹಿಂದುಗಳ ಸಂಘಟನೆಗೆ ಹನುಮಾನ ಚಾಲಿಸಾ ಪಠಣ

New Togadiya 2 New 2
Published on

ಹುಬ್ಬಳ್ಳಿ : ಭಾರತದ 20 ಕೋಟಿ ಹಿಂದು ಕುಟುಂಬಗಳನ್ನು ಒಂದುಗೂಡಿಸುವ ಉದ್ದೇಶದಿಂದ ಪ್ರತಿ ಶನಿವಾರ ಹನುಮಾನ ಚಾಲಿಸಾ ಪಠಣದ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದೇ ಡಿಸೆಂಬರ್​ವರೆಗೆ ಈ ಅಭಿಯಾನದಲ್ಲಿ 1 ಲಕ್ಷ ಕುಟುಂಬ ಜೋಡಿಸುವ ಗುರಿ ಹೊಂದಲಾಗಿದೆ ಎಂದು ಅಂತಾರಾಷ್ಟ್ರೀಯ ಹಿಂದು ಪರಿಷತ್ ಸಂಸ್ಥಾಪಕ ಅಧ್ಯಕ್ಷ ಡಾ. ಪ್ರವೀಣಭಾಯಿ ತೊಗಾಡಿಯಾ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಹಿಂದು ಪರಿಷತ್ ಹಾಗೂ ಬಜರಂಗ ದಳದ ವತಿಯಿಂದ ‘ಸ್ವಾಸ್ಥ್ಯ ಹಿಂದು, ಸುರಕ್ಷಿತ ಹಿಂದು, ಸಮೃದ್ಧ ಹಿಂದು ಎಂಬ ಸಂಕಲ್ಪದೊಂದಿಗೆ’ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಹಿಂದು ಚಿಂತನಾ ಸಭೆಯಲ್ಲಿ ಅವರು ಮಾತನಾಡಿದರು.

ಊರಿಗೊಂದು, ಗಲ್ಲಿಗೊಂದು ಮಸೀದಿ ಮಾಡಿಕೊಂಡಿರುವ ಮುಸ್ಲಿಂರು, ಸಂಘಟನೆಗಾಗಿ ಮಸೀದಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಅವರಲ್ಲಿ ಒಗ್ಗಟ್ಟು ಹೆಚ್ಚುತ್ತಿದೆ. ಹಿಂದುಗಳು ಸಹ ತಮ್ಮಲ್ಲಿನ ಬೇಧ ಮರೆತು ಒಗ್ಗಟ್ಟಾಗಬೇಕು. ಇದೇ ಕಾರಣಕ್ಕಾಗಿ ಹಿಂದುಗಳನ್ನು ಒಗ್ಗೂಡಿಸಿ, ಪ್ರತಿ ಶನಿವಾರ ಸಂಜೆ ಹನುಮಾನ ಚಾಲಿಸಾ ಪಠಿಸುವ ಅಭಿಯಾನ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಈ ಅಭಿಯಾನ ಹನುಮಾನ ಚಾಲಿಸಾ ಪಠಣಕ್ಕೆ ಮಾತ್ರ ಸೀಮಿತವಲ್ಲ. ಆ ಸಂದರ್ಭದಲ್ಲಿ ಹಿಂದುಗಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಬೇಕು. ಶಿಕ್ಷಣಕ್ಕಾಗಿ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸಲು, ಬಡವರಿಗೆ ಉದ್ಯೋಗ ಒದಗಿಸಲು ಸಹ ಈ ಅಭಿಯಾನ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.

ಒಗ್ಗಟ್ಟಿನ ಕೊರತೆ : ಹಿಂದುಗಳು ಒಗ್ಗಟ್ಟಿನಿಂದ ಹೋರಾಡಿದ್ದರೆ ಮೊಹಮ್ಮದ್ ಘಜನಿಯ ಎಲುಬು ಕೂಡು ಸಿಗುತ್ತಿರಲಿಲ್ಲ. ಹಿಂದುಗಳಲ್ಲಿ ಒಗ್ಗಟ್ಟಿನ ಕೊರತೆ ಮೊದಲಿನಿಂದಲೂ ಇದೇ. ಹೀಗಾಗಿಯೇ, ಬ್ರಿಟಿಷರು ಸಹ ನಮ್ಮನ್ನು ನೂರಾರು ವರ್ಷ ಆಳಿದರು ಎಂದು ಕಳವಳ ವ್ಯಕ್ತಪಡಿಸಿದರು.

ಅಯೋಧ್ಯೆಯ ಬಾಬರಿ ಮಸೀದಿ ಬಗ್ಗೆಯೂ ಜನರಲ್ಲಿ ಆರಂಭದಲ್ಲಿ ಮಾಹಿತಿ ಇರಲಿಲ್ಲ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ವಣಕ್ಕಾಗಿ 450 ವರ್ಷಗಳಿಂದ ಹೋರಾಟ ನಡೆದಿದೆ. ಆರಂಭದಲ್ಲಿ ಅಯೋಧ್ಯೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿನ ಜನರಿಗೆ ಮಾತ್ರ ಇದರ ಅರಿವಿತ್ತು. ಆಗ, ದೇಶದ ಒಟ್ಟಾರೆ ಜನಸಂಖ್ಯೆಯ ಕೇವಲ ಶೇ. 10ರಷ್ಟು ಜನರು ಮಾತ್ರ ರಾಮ ಮಂದಿರಕ್ಕಾಗಿ ಹೋರಾಟ ನಡೆಸಿದ್ದರು ಎಂದರು.

1986ರಲ್ಲಿ ರಾಮ ಜಾನಕಿ ರಥಯಾತ್ರೆ ಮೂಲಕ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಅಭಿಯಾನ ತುರುಸು ಪಡೆಯಿತು. ಪ್ರತಿ ಹಳ್ಳಿಗೆ ಭೇಟಿ ನೀಡಿ, ಹಿಂದು ಸಿಂಹಗಳನ್ನು ಎಬ್ಬಿಸಿದೇವು. 1992ರಲ್ಲಿ ಬಾಬರಿ ಮಸೀದಿ ನೆಲಸಮಗೊಳಿಸುವ ಮೂಲಕ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿದ ಹೊಸ ಸಂಕಲ್ಪ ತೊಡಲಾಯಿತು ಎಂದು ಹೇಳಿದರು.

ದೇಶ ಸ್ವಾತಂತ್ರ್ಯೊಂಡಾಗ ಶೇ. 86ರಷ್ಟಿದ್ದ ಹಿಂದುಗಳ ಸಂಖ್ಯೆ, ಇದೀಗ ಶೇ. 78ರಷ್ಟಾಗಿದೆ. ಆದರೆ, ಮುಸ್ಲಿಂ ಸಮುದಾಯದ ಜನಸಂಖ್ಯೆ ನಿರಂತರ ಹೆಚ್ಚಾಗಿದೆ. ದೇಶದಲ್ಲಿ ಹಿಂದುಗಳ ಬಹುತ್ವಕ್ಕಾಗಿ ಜನಸಂಖ್ಯೆ ಕಾನೂನು ಜಾರಿಗೆ ತರಬೇಕು. ಬಾಂಗ್ಲಾದೇಶದ ಮುಸ್ಲಿಂರನ್ನು ಇಲ್ಲಿಂದ ಓಡಿಸಬೇಕು ಎಂದು ಅಭಿಪ್ರಾಯಿಸಿದರು.

ಮತಾಂತರ ತಡೆಯಲು ಧರ್ಮಭಿಮಾನ, ಶ್ರದ್ಧೆ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಹಿಂದುಗಳಲ್ಲಿ ಜಾಗೃತಿ ಮೂಡಿಸಬೇಕು. ಶಿಕ್ಷಣ, ಉದೊ್ಯೕಗ ನೀಡಬೇಕು. ಹಿಂದು ಸಮಾಜ ದೊಡ್ಡದಿದೆ, ಸಂಸ್ಕೃತಿಯೂ ವಿಭಿನ್ನವಾಗಿದೆ. ಈ ಹಿನ್ನೆಲೆಯಲ್ಲಿ ಒಂದೇ ಸಂಘಟನೆಯಿಂದ ಹಿಂದುಗಳ ಜಾಗೃತಿ ಅಸಾಧ್ಯ. ಇದಕ್ಕಾಗಿ ಸಾವಿರಾರು ಸಂಘಟನೆಗಳು ಹುಟ್ಟಿಕೊಳ್ಳಲಿ. ಎಲ್ಲ ಸಂಘಟನೆಗಳ ಮಧ್ಯೆ ಸ್ನೇಹಮಯ ವಾತಾವರಣ ಇರಲಿ. ಹಿಂದು ಸಮಾಜ ದೊಡ್ಡ ಸಮುದ್ರದಂತೆ ಹರಿಯುತ್ತಿರಬೇಕು ಎಂದರು.

ಸಾನಿಧ್ಯ ವಹಿಸಿದ್ದ ಧಾರವಾಡದ ಶ್ರೀ ಪರಮಾತ್ಮನಂದ ಸ್ವಾಮೀಜಿ ಮಾತನಾಡಿ, ಹಿಂದುಗಳು ಒಗ್ಗೂಡುವ ಸಂಕಲ್ಪ ಮಾಡಬೇಕು. ಅನ್ಯ ಧರ್ಮದವರು ಸಂಘಟನೆಯ ಕೆಲಸವನ್ನು ಹೆಚ್ಚು ಜಾಗೃತಿಯಿಂದ ಮಾಡುತ್ತಿದ್ದಾರೆ. ಹೀಗಾಗಿ, ಹಿಂದುಪರ ಸಂಘಟನೆಗಳು ಸಹ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಂಘಟನೆಯ ಕೆಲಸ ಮಾಡುವಂತಾಗಲಿ ಎಂದು ಸಲಹೆ ನೀಡಿದರು.

ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಅಂತಾರಾಷ್ಟ್ರೀಯ ಹಿಂದು ಪರಿಷತ್​ನ ಕರ್ನಾಟಕ ಕಾರ್ಯಾಧ್ಯಕ್ಷ ರಮೇಶ ಕುಲಕರ್ಣಿ, ಪ್ರದೀಪ ಗೌಡರ, ಉದ್ಯಮಿ ನರೇಶ ಷಾಹ, ಸುರೇಶ ಜೈನ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net