ಎಚ್.ಡಿ.ಕೋಟೆಯಲ್ಲಿ ಬೃಹತ್ ಶೋಭಾಯಾತ್ರೆ- ಹನುಮ ಜಯಂತಿ

4 HDK 2
Published on

ಎಚ್.ಡಿ.ಕೋಟೆ : ಹನುಮನ ಸ್ವಾಮಿಭಕ್ತಿ ನಮ್ಮೆಲ್ಲರ ಸತ್ಕಾರ್ಯಗಳಿಗೆ ಪ್ರೇರಣೆಯಾಗಬೇಕು ಎಂದು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರ ಸ್ವಾಮೀಜಿ ಹೇಳಿದರು.ಪಟ್ಟಣದಲ್ಲಿರುವ ಗದ್ದಿಗೆ ಸರ್ಕಲ್ ಬಳಿ ಇರುವ ಶ್ರೀ ಭಂಡಾರಿ ಅಮ್ಮನವರ ದೇವಸ್ಥಾನ ಆವರಣದಲ್ಲಿ ಶ್ರೀ ಹನುಮ ಸೇವಾ ಸಮಿತಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ 7ನೇ ವರ್ಷದ ಹನುಮ ಜಯಂತಿ, ಶೋಭಾ ಯಾತ್ರೆಗೆ ಪುಷ್ಪಾರ್ಚನೆ ನೆರವೇರಿಸಿ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು. ಭರತಭೂಮಿಯಲ್ಲಿ ಶ್ರೀರಾಮ, ಶ್ರೀ ಕೃಷ್ಣ, ಹನುಮ ಸೇರಿದಂತೆ ನೂರಾರು ದೇವಾನು ದೇವತೆಗಳು ಅವತಾರ ಮಾಡಿದ್ದಾರೆ. ಅವರೆಲ್ಲರ ಸಾಧನೆ, ದುಷ್ಟ ಸಂಹಾರ, ಸಂಸ್ಕಾರದ ಜೀವನ, ಸ್ವಾಮಿಭಕ್ತಿ ಮತ್ತು ಬದುಕಿನ ಶೈಲಿ, ಅಸಾಮಾನ್ಯ ಶಕ್ತಿಗಳು ಮಹತ್ವದ ಕಾರ್ಯವನ್ನೇ ಮಾಡಿಸಿವೆ. ಇಂದಿಗೂ ಮಾಡಿಸುತ್ತ ಇವೆ ಎಂದು ಸ್ವಾಮೀಜಿ ನುಡಿದರು. ರಾಮನ ಅನನ್ಯ ಭಕ್ತನಾಗಿದ್ದ ಹನುಮಂತ ಸೇವೆಯ ಪ್ರತೀಕನಾಗಿದ್ದಾನೆ. ಅವನ ಸ್ವಾಮಿಭಕ್ತಿಯೇ ಇಂದು ಸಾವಿರಾರು ಜನರ ನಿಸ್ವಾರ್ಥ ಸೇವೆಗೆ ಕಾರಣವಾಗಿದೆ. ಯುವಜನರಿಗೆ ಹನುಮ ಐಕಾನ್ ಆಗಬೇಕಿದೆ. ಹನುಮನ ಆರಾಧನೆಯೊಂದಿಗೆ ತತ್ವ, ಆದರ್ಶಗಳ ಪಾಲನೆಯೂ ಆಗಬೇಕು. ಆಮೂಲಕ ಸಮಾಜ, ದೇಶ ಮಾದರಿ ಆಗಬೇಕು ಎಂದು ಅವರು ಸಂದೇಶ ನೀಡಿದರು.

ಗಮನಸೆಳೆದ ಮೆರವಣಿಗೆ: ಮೆರವಣಿಗೆಯಲ್ಲಿ ಮಂಗಳವಾದ್ಯ, ನಂದಿ ಕಂಬ, ವೀರಗಾಸೆ, ಚಂಡೆ, ಕಂಸಾಳೆ, ಆದಿವಾಸಿಗಳ ಕುಣಿತ, ಯುವಜನರ ಡಿ.ಜೆ., ಜಾನಪದ ಕಲಾತಂಡಗಳು ಗಮನ ಸೆಳೆದವು. ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿಬಂದ ಸಂದರ್ಭದಲ್ಲಿ ಯುವ ಜನರು ಜೈ ಶ್ರೀ ರಾಮ್, ಜೈ ಹನುಮಾನ್ ಘೋಷಣೆ ಮೊಳಗಿಸಿದರು. ಶ್ರೀ ವರದರಾಜ ಸ್ವಾಮಿ ದೇವಾಲಯದ ಬಳಿ ಮೆರವಣಿಗೆ ಸಮಾಪನಗೊಂಡಿತು. ಸಾವಿರಾರು ಭಕ್ತರಿಗೆ ಅನ್ನದಾನ ನೆರವೇರಿಸಲಾಯಿತು. ಹನುಮ ಜಯಂತಿ ಹಿನ್ನೆಲೆಯಲ್ಲಿ ಸುವ್ಯವಸ್ಥೆ ಪಾಲನೆಗೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರಿಗೆ ದಾರಿ ಉದ್ದಕ್ಕೂ ಮಜ್ಜಿಗೆ, ಪಾನಕಗಳನ್ನು ದಾನಿಗಳು ವಿತರಿಸಿದರು.

ಕೇಸರಿಮಯವಾಗಿತ್ತು ಕೋಟೆ: ಎಚ್.ಡಿ. ಕೋಟೆ ಪಟ್ಟಣ ಶನಿವಾರ ಸಂಪೂರ್ಣ ಕೇಸರಿಮಯವಾಗಿದ್ದು, ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ಎಲ್ಲೆಡೆ ಭಗವಾಧ್ವಜ, ತಳಿರು- ತೋರಣ ಕಂಡುಬಂತು. ವಿಶೇಷವಾಗಿ ಮಹಿಳೆಯರು ಮೆರವಣಿಗೆ ಮಾರ್ಗದ ಉದ್ದಕ್ಕೂ ನೃತ್ಯ ಮಾಡಿದ್ದು ಆಕರ್ಷಕವಾಗಿತ್ತು. ಮೆರವಣಿಗೆಯಲ್ಲಿ ಸಮಾಜ ಸೇವಕ ಕೆ.ಎಂ. ಕೃಷ್ಣನಾಯಕ, ಮುಖಂಡ ಜಯಪ್ರಕಾಶ್ ಚಿಕ್ಕಣ್ಣ, ಬಿಜೆಪಿ ತಾಲೂಕು ಅಧ್ಯಕ್ಷ ಶಂಭೇ ಗೌಡ, ಹನುಮ ಸೇವಾ ಸಮಿತಿ ಅಧ್ಯಕ್ಷ ಚಂದ್ರಮೌಳಿ, ಮಾಜಿ ಅಧ್ಯಕ್ಷ ಶ್ರೀಕಾಂತ, ಪದಾಧಿಕಾರಿಗಳಾದ ಮುತ್ತುರಾಜ್, ಬಿಡುಗಲು ರಾಜು, ಜಯಂತ, ರಾಜಣ್ಣ, ನಂದೀಶ, ಮಹೇಶ್, ಸುರೇಶ್, ಆರ್‌ಎಸ್‌ಎಸ್ ಮುಖಂಡ ಸಂತೋಷ್, ವಿಎಚ್‌ಪಿ ಮುಖಂಡರಾದ ರಾಹುಲ್, ಅಶೋಕ್, ಕೇರಳ ಸಮಾಜದ ಸುಧಾಕರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net