ಚಿಕ್ಕಬಳ್ಳಾಪುರ ಜಿಲ್ಲಾದ್ಯಂತ ಹನುಮ ದೇಗುಲಗಳಲ್ಲಿ ವಿಶೇಷ ಪೂಜೆ

IMG-20211216-WA0014
Published on

ಚಿಕ್ಕಬಳ್ಳಾಪುರ: ಹನುಮ ಜಯಂತಿ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಹನುಮ ದೇಗುಲಗಳಲ್ಲಿ ಗುರುವಾರ ವಿಶೇಷ ಪೂಜೆಗಳು ನಡೆದವು. ಬೆಳಗ್ಗೆಯಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆದರು.

ನಗರದ ಗಂಗಮ್ಮನಗುಡಿ ರಸ್ತೆಯ ಪೇಟೆ ಆಂಜನೇಯ, ಹಳೇ ಪೊಲೀಸ್ ಠಾಣೆ ರಸ್ತೆಯ ಜೀವಾಂಜನೇಯ, ಇಂದಿರಾ ನಗರದ ಆಭಯ ಆಂಜನೇಯ, ಹಳೇ ಜಿಲ್ಲಾಸ್ಪತ್ರೆಯ ಪಂಚಮುಖಿ ಆಂಜನೇಯ, ಅಂಬೇಡ್ಕರ್ ಕಾಲನಿ, ಹೊಸ ಜಿಲ್ಲಾಸ್ಪತ್ರೆ ಸೇರಿ ಹಲವೆಡೆ ಹನುಮ ಆಲಯಗಳಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು. ಭಕ್ತರಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.

ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ತಾಲೂಕಿನ ಸೂಲಾಲಪ್ಪದಿನ್ನೆ ಬಳಿ ಇರುವ ವೀರಾಂಜನೇಯ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಬೆಳಗ್ಗೆ ಶ್ರೀ ವೀರಾಂಜನೇಯ, ಲಕ್ಷ್ಮೀನರಸಿಂಹ, ಗಣಪತಿ ಸೇರಿ ವಿವಿಧ ದೇವರುಗಳಿಗೆ ವಿಶೇಷ ಅಭಿಷೇಕ, ಅಲಂಕಾರ ಮಾಡಲಾಗಿತ್ತು.

ಮೌಲ್ಯ, ಆಧ್ಯಾತ್ಮಿಕ ಚಿಂತನೆ ಅಗತ್ಯ: ಮಾನವೀಯ ಮೌಲ್ಯ, ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಅನವಶ್ಯಕ ಒತ್ತಡಗಳನ್ನು ಬದಿಗೊತ್ತಿ ಆಧ್ಯಾತ್ಮಿಕ ಚಿಂತನೆಗಳಿಂದ ನೆಮ್ಮದಿ ಜೀವನ ನಡೆಸಬೇಕು ಎಂದರು. ಜೀವಸಂಕುಲದಲ್ಲಿ ಮನುಷ್ಯನಿಗೆ ಪ್ರಕೃತಿ ವಿಶೇಷ ಶಕ್ತಿ ನೀಡಿದೆ. ಯಾವುದು ಒಳ್ಳೆಯದು ಮತ್ತು ಕೆಟ್ಟದು ಎನ್ನುವುದರ ಅರಿವಿದೆ ಎಂದರು. ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ, ಪ್ರೊ.ಎನ್.ಶಿವರಾಮರೆಡ್ಡಿ ಮತ್ತಿತರರು ಇದ್ದರು.

26ಕ್ಕೆ ಕಡಲೆ ಕಾಯಿ ಪರಿಷೆ: ಆದಿಚುಂಚನಗಿರಿ ಮಠದ ನೇತೃತ್ವದಲ್ಲಿ ಹನುಮ ಜಯಂತಿ ಅಂಗವಾಗಿ ಪ್ರತಿ ವರ್ಷದಂತೆ ಸೂಲಾಲಪ್ಪದಿನ್ನೆ ಬಳಿಯ ವೀರಾಂಜನೇಯ ದೇವಾಲಯದಲ್ಲಿ ಡಿ.26ಕ್ಕೆ ಕಡಲೆಕಾಯಿ ಪರಿಷೆ ನಡೆಯಲಿದೆ. ಕಾರ್ಯಕ್ರಮಕ್ಕೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಜಿಲ್ಲೆ ಮಾತ್ರವಲ್ಲದೆ ವಿವಿಧ ಭಾಗಗಳಿಂದ ಕಡಲೆಕಾಯಿಗಳನ್ನು ರೈತರು ತರಲಿದ್ದು, ಪರಿಷೆ ಹಿನ್ನೆಲೆಯಲ್ಲಿ ಸಿಹಿ, ತಿಂಡಿ-ತಿನಿಸು ಅಂಗಡಿಗಳನ್ನು ತೆರೆಯಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net