

ಮಡಿಕೇರಿ:
ಮಡಿಕೇರಿ ದಸರಾಕ್ಕೆ ಪೈಪೋಟಿ ನೀಡುವಂತೆ ಕುಶಾಲನಗರದಲ್ಲಿ ನಡೆಸಿಕೊಂಡು ಬರಲಾಗುತ್ತಿರುವ ಹನುಮ ಜಯಂತಿ ಕಾರ್ಯಕ್ರಮ ಈ ವರ್ಷ ಮತ್ತಷ್ಟು ಅದ್ದೂರಿಯಾಗಿ ಆಚರಿಸಲು ಆಯೋಜಕರು ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಭರದ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಶಾಸಕ ಡಾ. ಮಂತರ್ ಗೌಡ ಒತ್ತಾಸೆಯಾಗಿ ನಿಂತಿರುವುದು ಹನುಮ ಜಯಂತಿ ದಶಮಂಟಪ ಸಮಿತಿಯ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.
ಮಡಿಕೇರಿ ದಸರಾ ಎಂದ ಕೂಡಲೇ ಝಗಮಗಿಸುವ ವಿದ್ಯುತ್ ದೀಪಗಳು, ಅಬ್ಬರದ ಡಿಜೆ ಸಂಗೀತ, ಧ್ವನಿ ಮತ್ತು ಚಲನೆಗಳ ಮೂಲಕ ಜೀವ ಪಡೆದುಕೊಳ್ಳುವ ದೇವ-ದಾನವರ ಬೃಹತ್ ಕಲಾಕೃತಿಗಳು, ಕಿಕ್ಕಿರಿದು ಸೇರುವ ಜನಸಂದಣಿ ಕಣ್ಣು ಮುಂದೆ ಬರುತ್ತದೆ. ಇಂಥದ್ದೇ ವಾತಾವರಣ ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯ ವಾಣಿಜ್ಯ ನಗರಿ ಹೆಗ್ಗಳಿಕೆಯ ಕುಶಾಲನಗರದಲ್ಲೂ ಪ್ರತಿ ವರ್ಷ ಹನುಮ ಜಯಂತಿಯ ದಿನ ಕಂಡು ಬರುತ್ತಿದೆ. ಇಲ್ಲಿಯ ಹನುಮ ಜಯಂತಿ ಆಚರಣೆ ವರ್ಷದಿಂದ ವರ್ಷಕ್ಕೆ ಜನಪ್ರಿಯವಾಗುತ್ತಿದ್ದು, ಹೆಚ್ಚು ಜನರನ್ನು ಸೆಳೆಯುತ್ತಿದೆ. ಅದರಲ್ಲೂ ಯುವ ಜನರ ಪ್ರಮುಖ ಆಕರ್ಷಣೀಯ ಉತ್ಸವವಾಗಿ ಬೆಳೆದು ಬರುತ್ತಿದೆ.
ಆರಂಭದ ವರ್ಷಗಳಲ್ಲಿ ಇಲ್ಲಿನ ರಥಬೀದಿಯಲ್ಲಿ ಇರುವ ಶ್ರೀ ಆಂಜನೇಯ ದೇವಾಲಯದಲ್ಲಿ ಹನುಮ ಜಯಂತಿಯನ್ನು ವಿಜೃಂಭಣೆಯಿAದ ಆಚರಿಸಿ ಶ್ರೀ ಅಂಜನೇಯ ಸೇವಾ ಸಮಿತಿ ಮತ್ತು ಶ್ರೀ ರಾಮಂಜನೇಯ ಯುವಕ ಸಂಘದ ವತಿಯಿಂದ ಅಂದೇ ಸಂಜೆ ವಿದ್ಯುತ್ ದೀಪಾಲಂಕೃತ ಮಂಟಪದಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಲಾಗುತ್ತಿತ್ತು. ನಾದಸ್ವರ ಸೇರಿದಂತೆ ಮಂಗಳವಾದ್ಯಗಳೊAದಿಗೆ ನಡೆಸಲಾಗುತ್ತಿದ್ದ ಈ ಮೆರವಣಿಗೆ ವೇಳೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆಂಜನೇಯನ ಅನುಗ್ರಹಕ್ಕೆ ಪಾತ್ರರಾಗುತ್ತಿದ್ದರು.
2020ರಿಂದ ಈಚೆಗೆ ಕುಶಾಲನಗರದಲ್ಲಿ ಹನುಮ ಜಯಂತಿ ಆಚರಣೆ ಬೇರೆಯದ್ದೇ ಆದ ಆಯಾಮ ಪಡೆದುಕೊಳ್ಳುತ್ತಾ ಬಂದಿದೆ. ಉತ್ಸವ ಮೂರ್ತಿಯ ಮೆರವಣಿಗೆ ಜತೆಯಲ್ಲಿ ಪಟ್ಟಣ ವ್ಯಾಪ್ತಿಯ ಇತರ ದೇವಾಲಯಗಳಿಂದಲೂ ಮಂಟಪಗಳು ಹೊರಟು ಪಟ್ಟಣದ ಮುಖ್ಯ ಬೀದಿಗೆ ಆಗಮಿಸಿ ಎಲ್ಲಾ ಮಂಟಪಗಳು ಒಟ್ಟಿಗೆ ಮೆರವಣಿಗೆ ನಡೆಸುವ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ. ಮಡಿಕೇರಿ ದಸರಾ ಮಾದರಿಯ ಆಚರಣೆಗೆ ಚಾಲನೆ ನೀಡಲಾಗಿದ್ದು, ಝಗಮಗಿಸುವ ವಿದ್ಯುತ್ ದೀಪಗಳು, ಅಬ್ಬರದ ಡಿಜೆ ಸಂಗೀತ, ಧ್ವನಿ ಮತ್ತು ಚಲನೆಗಳ ಬೃಹತ್ ಕಲಾಕೃತಿಗಳು ಇಲ್ಲಿಗೂ ಕಾಲಿಟ್ಟಿವೆ.
ಕುಶಾಲನಗರ ಹನುಮ ಜಯಂತಿಯಲ್ಲಿ ಭಾಗವಹಿಸುವ ಮಂಟಪಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಈ ಬಾರಿ ದಶ ಮಂಟಪಗಳ ಮೆರವಣಿಗೆಗೆ ಸಿದ್ಧತೆ ನಡೆಸಲಾಗುತ್ತಿದೆ. ಸಂಬAಧಿಸಿದ ದೇವಾಲಯಗಳ ಸಮಿತಿಗಳ ಜತೆಗೆ ಈಗಾಗಲೇ ಹನುಮ ಜಯಂತಿ ದಶಮಂಟಪ ಸಮಿತಿಯ ಪದಾಧಿಕಾರಿಗಳು ಹಲವು ಸುತ್ತಿನ ಸಭೆ ನಡೆಸಿದ್ದು, ಮಂಟಪ ಮತ್ತು ಮೆರವಣಿಗೆ ರೂಪುರೇಷೆಯ ಬಗ್ಗೆ ಚರ್ಚೆಗಳನ್ನು ನಡೆಸಲಾಗಿದೆ. ಈ ಬಾರಿ ಮಂಟಪಗಳ ಮಧ್ಯೆ ಸ್ಪರ್ಧೆಯನ್ನೂ ಏರ್ಪಡಿಸಲಾಗುತ್ತಿರುವುದರಿಂದ ಒಂದಕ್ಕಿAತ ಒಂದು ವಿಭಿನ್ನ ಮಂಟಪಗಳು ಮೆರವಣಿಗೆಯಲ್ಲಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಲಿರುವ ಮಂಟಪಗಳಿಗೆ ಸಂಬAಧಿಸಿದ ದೇವಾಲಯ ಸಮಿತಿಗಳೂ ತಮ್ಮ ಮಂಟಪಗಳಲ್ಲಿ ವಿಭಿನ್ನತೆ ತೋರಿಸಲು ಪ್ರಯತ್ನ ನಡೆಸಿದ್ದಾರೆ.
ಈ ವರ್ಷ ಡಿ.13ಕ್ಕೆ ನಡೆಯುವ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಆಂಜನೇಯ ದೇವಾಲಯ ಸಮಿತಿಯ ಮಂಟಪದ ಜತೆಗೆ ಹೆಚ್‌ಆರ್‌ಪಿ ಕಾಲೋನಿಯ ರಾಮ ಮಂದಿರ, ಗುಡ್ಡೆಹೊಸೂರು, ಮಾದಾಪಟ್ಟಣ, ಬೈಚನಹಳ್ಳಿ, ಗೋಪಾಲ ಸರ್ಕಲ್, ಕೂಡಿಗೆ, ಮುಳ್ಳುಸೋಗೆ, ಚಿಕ್ಕತ್ತೂರು ಮತ್ತು ಹಾರಂಗಿಯಿAದ ಮಂಟಪಗಳು ಕುಶಾಲನಗರ ಪಟ್ಟಣಕ್ಕೆ ಆಗಮಿಸಲಿವೆ. ಈ ವರ್ಷ ವಿಶೇಷವಾಗಿ ಕೊಡಗು-ಮೈಸೂರು ಗಡಿ ಗ್ರಾಮವಾಗಿರುವ ಕೊಪ್ಪದಿಂದಲೂ ಮಂಟಪವೊAದನ್ನು ಹೊರಡಿಸುವ ಪ್ರಯತ್ನ ನಡೆದಿದೆ.
ಶಿಸ್ತುಬದ್ಧ ಕಾರ್ಯಕ್ರಮ ಎನ್ನುವ ಹೆಗ್ಗಳಿಕೆಯ ಕುಶಾಲನಗರ ಹನುಮ ಜಯಂತಿ ಮೆರವಣಿಗೆ ವೇಳೆ ಮಹಿಳೆಯರು ಮತ್ತು ಯುವತಿಯರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಹಾಗಾಗಿ ಇದೇ ಹೆಗ್ಗಳಿಕೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹನುಮ ಜಯಂತಿ ದಶಮಂಟಪ ಸಮಿತಿ ವಿಶೇಷ ಮುತುವರ್ಜಿ ವಹಿಸಿದೆ. ಇದರ ಜತೆಯಲ್ಲಿ ಶಾಂತಿಯುತವಾಗಿ ಮತ್ತು ಯಾವುದೇ ಗೊಂದಲಗಳು ಇಲ್ಲದೇ ಕಾರ್ಯಕ್ರಮ ನಡೆಸುವ ಸಲುವಾಗಿ ಅನೇಕ ಸಭೆಗಳನ್ನು ನಡೆಸಿ ಚರ್ಚಿಸಲಾಗಿದೆ. ಕಳೆದ ವಾರದ ಸಿದ್ಧತಾ ಸಭೆಯಲ್ಲಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಪಾಲ್ಗೊಂಡು ಅನೇಕ ಸಲಹೆಗಳನ್ನು ನೀಡಿದ್ದಲ್ಲದೆ ತಮ್ಮಿಂದ ಆಗುವ ಎಲ್ಲಾ ರೀತಿಯ ಸಹಕಾರದ ಭರವಸೆಯನ್ನೂ ಕೊಟ್ಟಿದ್ದಾರೆ.
ಕಳೆದ ವರ್ಷ 5 ಮಂಟಪಗಳು ಕಲಾಕೃತಿಗಳ ಜತೆಯಲ್ಲಿ ಪೌರಾಣಿಕೆ ಕತೆಗಳ ಸಾರಾಂಶ ಪ್ರಸ್ತುತಪಡಿಸಿದ್ದವು. ಆದರೆ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪೊಲೀಸರು ಸಮಯದ ಮಿತಿ ಹೇರಿದ್ದರಿಂದ ಕಲಾಕೃತಿಗಳ ಪ್ರದರ್ಶನ ಪರಿಪೂರ್ಣ ಆಗಿರಲಿಲ್ಲ. ಹಾಗಾಗಿ ಈ ವರ್ಷದಿಂದ ಮಡಿಕೇರಿ ದಸರಾದಂತೆ ಮುಂಜಾನೆಯ ತನಕ ಸಮಯಾವಕಾಶ ಒದಗಿಸುವಂತೆ ಹನುಮ ಜಯಂತಿ ದಶಮಂಟಪ ಸಮಿತಿ ಬೇಡಿಕೆ ಇಟ್ಟಿದೆ. ಮಂಟಪಗಳು ಸಾಗುವ ಮಾರ್ಗದ ದುರಸ್ತಿ, ಮರಗಳ ರಂಬೆ ತೆರವು, ಸರ್ಕಾರದಿಂದ ಅನುದಾನಕ್ಕೂ ಮನವಿ ಸಲ್ಲಿಸಲಾಗಿದೆ.
ಹನುಮ ಜಯಂತಿ ದಶಮಂಟಪ ಸಮಿತಿ ಬೇಡಿಕೆಗಳಿಗೆ ಶಾಸಕ ಡಾ. ಮಂತರ್ ಗೌಡ ಸಕರಾತ್ಮಕವಾಗಿ ಸ್ಪಂದಿಸಿರುವುದರಿAದ ಸಮಿತಿಯ ಉತ್ಸಾಹ ಹೆಚ್ಚಾಗಿದೆ. ಹಾಗಾಗಿ ಈ ವರ್ಷದ ಹನುಮ ಜಯಂತಿ ಮೇಲೆ ಸ್ಥಳೀಯರು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಕುಶಾಲನಗರದಲ್ಲಿ ನಡೆಸಲಾಗುತ್ತಿರುವ ಹನುಮಜಯಂತಿ ಕಾರ್ಯಕ್ರಮ ವರ್ಷದಿಂದ ವರ್ಷಕ್ಕೆ ಹೆಚ್ಚು ಜನಪ್ರಿಯವಾಗುತ್ತಿದೆ. ಹೆಚ್ಚು ಹೆಚ್ಚು ಜನ ಸೇರುತ್ತಿದ್ದು, ಅತ್ಯಂತ ಶಿಸ್ತುಬದ್ಧವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಮಡಿಕೇರಿ ದಸರಾ ಮಾದರಿಯಲ್ಲಿ ವಿಜೃಂಭಣೆಯಿAದ ನಡೆಸುವ ಗುರಿ ಇಟ್ಟುಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಭರದ ಸಿದ್ಧತೆ ನಡೆದಿದೆ. ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕೂಡ ಪೂರಕ ಸಹಕಾರ ಕೊಡುತ್ತಿದ್ದಾರೆ. ಎಲ್ಲರ ಸಹಕಾರದಿಂದ ಈ ವರ್ಷ ಅದ್ಧೂರಿಯಾಗಿ ಹನುಮ ಜಯಂತಿ ಆಚರಿಸಲಾಗುವುದು.
ಎಂ.ಡಿ. ಕೃಷ್ಣಪ್ಪ, ಅಧ್ಯಕ್ಷ, ಹನುಮ ಜಯಂತಿ ದಶಮಂಟಪ ಸಮಿತಿ
ಕುಶಾಲನಗರದಲ್ಲಿ ಹನುಮ ಜಯಂತಿ ವಿಜೃಂಭಣೆಯಿAದ ನಡೆಯಬೇಕು ಎನ್ನುವುದು ನಮ್ಮ ಇಚ್ಛೆಯೂ ಆಗಿದೆ. ಈ ನಿಟ್ಟಿನಲ್ಲಿ ಸಮಿತಿಯ ತೀರ್ಮಾನದಂತೆ ಹನುಮ ಜಯಂತಿ ಆಚರಣೆಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ವೈಯಕ್ತಿಕವಾಗಿ ಎಲ್ಲಾ ಮಂಟಪಗಳಿಗೆ ಆರ್ಥಿಕ ಸಹಾಯ ಒದಗಿಸಲಿದ್ದೇನೆ. ಸÀರ್ಕಾರದ ಅನುದಾನ ಕೊಡಿಸಲು ಪ್ರಯತ್ನ ನಡೆಸಲಾಗುವುದು. ಹನುಮಜಯಂತಿ ಕಾರ್ಯಕ್ರಮ ಶಾಂತಿಯುತವಾಗಿಯೂ ನಡೆಯಬೇಕಿದೆ.
ಡಾ. ಮಂತರ್ ಗೌಡ, ಮಡಿಕೇರಿ ಶಾಸಕ