

ಮೈಸೂರು: ಅರಮನೆ ಅಂಗಳದಲ್ಲಿ ಬಾಲಿವುಡ್ ಗಾಯಕರಾದ ಹಂಸಿಕಾ ಅಯ್ಯರ್ ಮತ್ತು ವಿಪಿನ್ ಅನೇಜ ಗಜಲ್ ಹಾಗೂ ಜನಪದ ಗಾಯನದ ಮೂಲಕ ಮೋಡಿ ಮಾಡಿದರು.
ಅರಮನೆಯ ಬೆಳಕಿನ ವೈಭನದಲ್ಲಿ ನಡೆದ ಈ ಗಾಯನ ಕಾರ್ಯಕ್ರಮಕ್ಕೆ ಮೈಸೂರಿಗರು ಮನಸೋತರು. ಹಿಂದಿ ಹಾಗೂ ಕನ್ನಡದ ಜನಪದ ಗೀತೆ ಹಾಗೂ ಗಜಲ್‌ಗಳನ್ನು ಆಧುನಿಕ ಶೈಲಿಯಲ್ಲಿ ಹಾಡುವ ಮೂಲಕ ಗಮನ ಸೆಳೆದರು. ರಾಮ್ ಸಿಯಾ ರಾಮ್ ಸಿಯಾ ರಾಮ್ ಜೈ ಜೈ ರಾಮ್ ಹಾಡಿನೊಂದಿಗೆ ಗಾಯನ ಪ್ರಾರಂಭಿಸಿದ ಅವರು ನಂತರ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ., ತುಜ್ ಬಿನ್ ಜೀನಾ.., ತೇರೆ ಬಿನ್ ನೈ ಲಗ್ದಾ ದಿಲ್ ಮೇರಾ ಡೋಲ್ನಾ.., ಜಾನೇ ಜಾತಿಹೇ.., ಐಗಿರಿ ನಂದಿನಿ ನಂದಿತಾ ಮೇದಿನಿ ವಿಶ್ವ ವಿನೋದಿನಿ ನಂದಿನುತೇ.., ಆಡಿದವರ ಮನವಾ ಬಲ್ಲೆ, ನೀಡಿದವರ ನಿಜವಾ ಬಲ್ಲೆ.., ದಮಾ ದಮ್ ಮಸ್ತ್ ಕಲಂದರ್.., ಒಲಿದು ಬಾರಮ್ಮಯ್ಯ ಒಲಿದು ಬಾರೆ ಬೆಟ್ಟಾದ ಚಾಮುಂಡಿ ಒಲಿದು ಬಾರೆ…ಮುಂತಾದ ಹಾಡುಗಳನ್ನು ಹಾಡಿ ರಂಜಿಸಿದರು.
ಎಚ್.ರಾಜೇಶ್ ತಂಡ ನಡೆಸಿಕೊಟ್ಟ ಭಾವಗೀತೆ ಗಾಯನ ಅರಮನೆ ಆವರಣದಲ್ಲಿ ಕನ್ನಡದ ಕಂಪು ಸೂಸಿತು. ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು.., ಮುನಿಸು ತರವೇ ಮುಗುದೆ ಹಿತವಾಗಿ ನಗಲೂ ಬಾರಾದೆ.., ನೀ ಸಿಗದೆ ಬಾಳೊಂದು ಬಾಳೇ ಕೃಷ್ಣ.., ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ.., ಆವು ಈವಿನ ನಾವು ನೀವಿಗೆ ಆನು ತಾನಾದ ತನ ನನಾ.., ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರದೇ ಬಾರಿಸದಿರು ತಂಬೂರಿ… ಮುಂತಾದ ಹಾಡುಗಳನ್ನು ಹಾಡಿ ರಂಜಿಸಿದರು.
ಡಾ.ಕೆ. ಕುಮಾರ್ ತಂಡ ಆಕರ್ಷಕವಾಗಿ ಭರತನಾಟ್ಯ ಪ್ರಸ್ತುತ ಪಡಿಸಿದರು. ವಕ್ರತುಂಡ ಗಣನಾಥ.., ಮೂಷಿಕ ವಾಹನ ಮೋದಕ ಹಸ್ತ.., ತಾಯೇ ಚಾಮುಂಡೇಶ್ವರಿ ಚಂದ್ರಕಲಾಧರಿ.., ಇಂದಿನ ದಿನವೇ ಶುಭದಿನ… ಮುಂತಾದ ಹಾಡುಗಳಿಗೆ ಹೆಜ್ಜೆ ಹಾಕಿದರು. ಕಂಸಾಳೆ ಜಾನಪದ ಕಲಾ ಸಂಘದಿಂದ ಬೀಸು ಕಂಸಾಳೆ ನೃತ್ಯ ಗಮನ ಸೆಳೆಯಿತು. ಕೆರೆಮನೆಯ ಇಡುಗಂಜಿ ಗಣಪತಿ ಯಕ್ಷಗಾನ ಮಂಡಳಿ ದಕ್ಷಯಜ್ಞ ಯಕ್ಷಗಾನ ಪ್ರಸಂಗ ಪ್ರಸ್ತುತ ಪಡಿಸಿತು. ವಿದುಷಿ ವಾರಿಜಾಶ್ರೀ ವೇಣುಗೋಪಾಲ್ ಮತ್ತು ಪಂಡಿತ್ ಪುರ್ಬಯಾನ್ ಚಟರ್ಜಿ ನಡೆಸಿಕೊಟ್ಟ ಕೊಳಲು-ಹಿಂದೂಸ್ತಾನಿ ಸಿತಾರ್ ಲಯತರಂಗ ಜುಗಲ್‌ಬಂದಿ ಫ್ಯೂಷನ್ ಗಮನ ಸೆಳೆಯಿತು.