ಕೊಲೆ ಮಾಡಿದ ಆರೋಪಿಯೂ ಆತ್ಮಹತ್ಯೆ!!

Murder case
Published on

ಕಾರವಾರ: ಜಿಲ್ಲೆಯನ್ನು  ತಲ್ಲಣಗೊಳಿಸಿದ್ದ ಹಣಕೋಣದಲ್ಲಿ ನಡೆದ  ಪುಣಾ ಉದ್ಯಮಿಯ ಹತ್ಯೆ ಪ್ರಕರಣವನ್ನು ಪೊಲೀಸ್ ಇಲಾಖೆ ಭೇದಿಸಿದೆ.

ಹದಗೆಟ್ಟ ಕೌಟುಂಬಿಕ ಸಂಬಂಧಗಳು ಹಾಗೂ ವೈಯಕ್ತಿಕ ದ್ವೇಷವು ಹತ್ಯೆಗೆ ಕಾರಣ ಎಂದು ತಿಳಿದು ಬಂದಿದ್ದು, ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ. 

ಆದರೆ, ಪ್ರಕರಣ ಮೊದಲ ಆರೋಪಿ, ಕೊಲೆಗೆ  ಸುಪಾರಿ ನೀಡಿದ್ದ ಗೋವಾದ ಉದ್ಯಮಿ ಗುರುಪ್ರಸಾದ ರಾಣೆ(52)ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ಅವರ ಶವವು ಗೋವಾದ ಪೊರವೋರಿಂ ಠಾಣಾ ವ್ಯಾಪ್ತಿಯಲ್ಲಿ  ಬೇತುಲ್ ನ ಮಾಂಡೋವಿ ನದಿಯಲ್ಲಿ ಪತ್ತೆಯಾಗಿದೆ. 

ಗುರುಪ್ರಸಾದ ರಾಣೆ ಕಾರವಾರ ಬೋಳಶಿಟ್ಟಾ  ಮೂಲದವರಾಗಿದ್ದು, ಗೋವಾದ ಪೋಂಡಾದಲ್ಲಿ ಡಿಸ್ಟಲರಿ ಹಾಗೂ ಪೇಂಟ್ ಉದ್ಯಮ ಹೊಂದಿದ್ದರು‌. ತಮ್ಮ ಫ್ಯಾಕ್ಟರಿಯ ಉದ್ಯೋಗಿಗಳಿಗೇ ಸುಫಾರಿ ಕೊಟ್ಟು ಹತ್ಯೆ ಮಾಡಿಸಿದ್ದರು.

ಹಣಕೋಣಕ್ಕೆ ಆಗಮಿಸಿ‌ಕೊಲೆ ಮಾಡಿದ ಅಸ್ಸಾಂ ಮೂಲದ ಲಕ್ಷ ಜ್ಯೋತಿನಾಥ ಎಂಬಾತನನ್ನು ಗೋವಾದಲ್ಲಿ ಬಿಹಾರ ಮೂಲದ ಮಾಸುಮ ಮಂಜೂರ್  ಮತ್ತು ಅಜ್ಮಲ್ ಪಯರನಿಯಾ ಎಂಬುವವರನ್ನು ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ.

ಹಿನ್ನೆಲೆ: ಸೆಪ್ಟೆಂಬರ್ 22 ರ ಬೆಳಗಿನ ತಾಲೂಕಿನ ಹಣಕೋಣದ ಸಾತೇರಿ ದೇವಸ್ಥಾನ ಸಮೀಪ ಉದ್ಯಮಿ ವಿನಾಯಕ ಕಾಶಿನಾಥ ನಾಯ್ಕ(58) ಅವರನ್ನು ಅವರ ಹಣಕೋಣದ  ಸ್ವಗ್ರಹದಲ್ಲಿ  ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಅವರ ಪತ್ನಿ ವೃಶಾಲಿ ಅವರ ಮೇಲೆಯೂ ಹಲ್ಲೆ ನಡೆದಿತ್ತು. ವಿನಾಯಕ ನಾಯ್ಕ ಪುಣಾದಲ್ಲಿ ಇಲೆಕ್ಟ್ರಾನಿಕ್ ಉದ್ಯಮ ಹೊಂದಿದ್ದರು.

ಸುಳಿವು ಕೊಟ್ಟ ಕಾರು

ಕೊಲೆಗಾರರು ಹತ್ಯೆ ಮಾಡಲು ತಂದಿದ್ದ ಬಿಳಿ ಮಾರುತಿ ಸ್ವಿಫ್ಟ್ ಕಾರಿನ ಓಡಾಟ ಹಣಕೋಣದ ಬ್ಯಾಂಕ್ ಒಂದರ ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಅದರ ಜಾಡು ಹಿಡಿದ ಪೊಲೀಸರು‌ ಕೃತ್ಯವನ್ನು ಬೇಧಿಸಿದ್ದಾರೆ. ಮೊಬೈಲ್ ಲೊಕೇಶನ್ ಆಧರಿಸಿ ಪೊಲೀಸರು ತನಿಖೆ ಕೈಗೊಂಡು ನವದೆಹಲಿ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ ಇಬ್ಬರನ್ನು  ಬಂಧಿಸಿದ್ದಾರೆ. 

ಚಿತ್ತಾಕುಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಎಎಸ್ ಪಿ ಸಿ.ಟಿ.ಜಯಕುಮಾರ್,  ಕಾರವಾರ ಡಿಎಸ್ ಪಿ ಗಿರೀಶ ಎಸ್.ವಿ.ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಗಳಾದ ಯು.ಎಚ್. ಸಾತೇನಹಳ್ಳಿ, ರಮೇಶ ಹೂಗಾರ, ಪಿಎಸ್ ಐಗಳಾದ ಮಹಾಂತೇಶ ವಾಲ್ಮೀಕಿ, ಪ್ರಕಾಶ ದೇವಾಡಿಗ ಹಾಗೂ ತಂಡಕ್ಕೆ ಡಿಜಿ ಅವರು 1 ಲಕ್ಷ ಬಹುಮಾನ ಘೋಷಿಸಿದ್ದಾರೆ ಎಂದು ಎಸ್ ಪಿ ಎಂ.ನಾರಾಯಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೊಲೆಯಾದವರ ತಂಗಿ, ಅಣ್ಣ‌ ಸೇರಿ  ವಿಚಾರಣೆ ಮಾಡಿದಾಗ ಅವರು ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಊರಿನಲ್ಲಿ ವಿಚಾರಿಸಿದಾಗ ಅವರ  ವೈವಾಹಿಕ ಸಂಬಂಧ ಸರಿಯಾಗಿಲ್ಲ ಎಂದು ಮಾಹಿತಿ ಆಧರಿಸಿ ತನಿಖೆ ನಡೆಸಲಾಯಿತು. ಗುರುಪ್ರಸಾದ ರಾಣೆ   ಮೂವರಿಗೆ ಒಟ್ಟು 2 ಲಕ್ಷ ಸುಫಾರಿ ಕೊಟ್ಟಿದ್ದ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net