

ಮಂಗಳೂರು: ಹಾಲು, ಹಾಲಿನ ಉತ್ಪನ್ನ ಮತ್ತು ಐಸ್‌ಕ್ರೀಂ ಉದ್ಯಮದಲ್ಲಿ ಮನೆಮಾತಾಗಿರುವ ಹಾಂಗ್ಯೊ ಸಂಸ್ಥೆ ಹೊಸ ಸಾಂಪ್ರದಾಯಿಕ ಉತ್ಪನ್ನವಾಗಿ ದನದ ತುಪ್ಪವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
ಭಾರತೀಯ ಆಹಾರ ಕ್ರಮದಲ್ಲಿ ತುಪ್ಪ ಅತ್ಯಂತ ಶ್ರೇಷ್ಠ ಸ್ಥಾನ ಪಡೆದಿದೆ. ಭಾರತೀಯ ಸಾಂಪ್ರದಾಯಿಕ ತುಪ್ಪ ತಯಾರಿಕಾ ಪದ್ಧತಿಯಂತೆ ಲಘು ಬೆಂಕಿಯ ಕಾವಿನಲ್ಲಿ ಅಂದರೆ ಸೌದೆಗಳಿಂದ ಬೆಣ್ಣೆಯನ್ನು ಬಿಸಿಮಾಡಿ ಹಾಂಗ್ಯೊ ತುಪ್ಪ ತಯಾರಿಸಲಾಗಿದೆ. ಇದರಿಂದ ತುಪ್ಪದ ಗುಣಮಟ್ಟ ಮತ್ತು ರುಚಿ ಶ್ರೇಷ್ಠವಾಗಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಜಗದೀಶ್ ಆರ್.ಪೈ ತಿಳಿಸಿದ್ದಾರೆ.
ಹಳದಿ, ಸಾಸಿವೆ ಬಣ್ಣದ ವಿಭಿನ್ನ ಪ್ಯಾಕೆಟ್‌ನಲ್ಲಿ ಎನಿಮೇಟೆಡ್ ಗೋವಿನ ಚಿತ್ರವನ್ನು ಬಿಡಿಸಲಾಗಿದ್ದು, ಶಾಸ್ತ್ರೀಯ ಕಲಾ ಪ್ರಕಾರವಾಗಿರುವ ಮಂಡಲವನ್ನು ಗೋವಿನ ಚಿತ್ರದೊಳಗೆ ವಿನ್ಯಾಸಗೊಳಿಸಲಾಗಿದೆ. ಈ ಮಂಡಲದ ಏಳು ಕಲಾಕೃತಿಗಳು ಉತ್ಪನ್ನದ ಸೌಂದರ್ಯಾ ಸ್ವಾದಕ್ಕೆ ನೀಡಿರುವ ಆದ್ಯತೆಯನ್ನು ಪ್ರತಿಬಿಂಬಿಸುತ್ತದೆ.
ಹಳದಿ, ಸಾಸಿವೆ ಬಣ್ಣದ ಪ್ಯಾಕ್ ತುಪ್ಪದ ಭವ್ಯತೆ, ಪ್ರಕಾಶ, ಹೊಳಪು ಮತ್ತು ತುಪ್ಪದ ಸುವಾಸನೆಯನ್ನು ಬಿಂಬಿಸುತ್ತದೆ. ತುಪ್ಪದ ಪ್ಯಾಕ್ ನೋಡಿದ ತಕ್ಷಣ ಸಾಂಪ್ರದಾಯಿಕತೆಯಿಂದ ಪ್ರೇರಣೆಗೊಂಡ ಉತ್ಪನ್ನ ಎಂಬ ಭಾವನೆ ಮೂಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.