ತೂಗು ಸೇತುವೆ ಸಂಚಾರಕ್ಕೆ ಮುಕ್ತಗೊಳಿಸಲು ಒತ್ತಾಯ

hanging bridge
Published on

ಕುಶಾಲನಗರ:

ಕುಶಾಲನಗರ ತಾಲೂಕು ಕಣಿವೆ ಗ್ರಾಮದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆ ಕೂಡಲೇ ದುರಸ್ತಿ ಪಡಿಸಿ ಅಳವಡಿಸಿರುವ ಬೀಗ ತೆರವುಗೊಳಿಸಿ ವಿದ್ಯಾರ್ಥಿಗಳು ಹಾಗೂ ಕೃಷಿ ಕಾರ್ಮಿಕರ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕೊಡಗಿನಲ್ಲಿ ಮಳೆ ಸುರಿದು ನದಿಯಲ್ಲಿ ಹೆಚ್ಚಿನ ಪ್ತಮಾಣದ ಹರಿವು ಇದ್ದ ಕಾರಣ ಶಿಥಿಲಗೊಂಡಿರುವ ತೂಗುಸೇತುವೆಯ ಮೇಲೆ ಸಂಚರಿಸುವ ಸಾರ್ವಜನಿಕರ ಹಿತದೃಷ್ಟಿಯಿಂದ ಕುಶಾಲನಗರ ತಾಲೂಕು ತಹಸೀಲ್ದಾರರು ಸ್ಥಳ ಪರಿಶೀಲಿಸಿ ತೂಗುಸೇತುವೆಯ ಪ್ರವೇಶ ದ್ವಾರಕ್ಕೆ ಈಚೆಗೆ ಬೀಗ ಅಳವಡಿಕೆ ಮಾಡಿದ್ದರು.

ಆದರೆ, ಇದೇ ತೂಗುಸೇತುವೆಯ ಮೂಲಕ ನದಿಯಾಚೆಯ ಗ್ರಾಮಗಳಿಂದ ಕೂಡಿಗೆ ಹಾಗೂ ಕುಶಾಲನಗರದ ವಿವಿಧ ಕಾಲೇಜುಗಳಿಗೆ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಹಾಗೂ ಕೂಡ್ಲೂರು ಕೈಗಾರಿಕಾ ಪ್ರದೇಶಕ್ಕೆ ಅಷ್ಟೇ ಸಂಖ್ಯೆಯ ಕಾರ್ಮಿಕರು ಓಡಾಡುವ ಕಾರಣ ಕೂಡಲೇ ಸೇತುವೆ ದುರಸ್ತಿ ಮಾಡಿ ಅಳವಡಿಸಿರುವ ಬೀಗವನ್ನು ತೆರೆದು ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಕಣಿವೆ ನಿವಾಸಿಗಳು ಒತ್ತಾಯಿಸಿದ್ದಾರೆ.

ಈ ವರ್ಷದ ಜನವರಿ 7 ರಂದು ತೂಗುಸೇತುವೆ ವೀಕ್ಷಣೆಗೆ ಆಗಮಿಸಿದ್ದ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹಾಗೂ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಶಿಥಿಲಗೊಂಡಿರುವ ತೂಗುಸೇತುವೆಯನ್ನು ಮಳೆಗಾಲದ ಒಳಗೆ ಸರಿಪಡಿಸುವುದಾಗಿ ಹೇಳಿದ್ದರಾದರೂ, ಮಳೆಗಾಲ ಶುರುವಾದರೂ ಕೂಡ ಇತ್ತ ಗಮನ ವಹಿಸಿಲ್ಲ. ಇನ್ನಾದರೂ ಜಿಲ್ಲಾಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ ತೂಗುಸೇತುವೆ ಸರಿಪಡಿಸಬೇಕೆಂದು ಸಾರ್ವಜನಿಕರು ಈ ಸಂದರ್ಭ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net