ದೌರ್ಜನ್ಯ ಎಸಗಿದವರನ್ನು ಗಲ್ಲಿಗೇರಿಸಿ

07Tmk_Mahila_Protest
Published on

ತುಮಕೂರು: ಉತ್ತರ ಪ್ರದೇಶದಲ್ಲಿ ಯುವತಿ ಮೇಲೆ ದೌರ್ಜನ್ಯ ಎಸಗಿದವರನ್ನು ಗಲ್ಲಿಗೇರಿಸುವಂತೆ ಜಿಲ್ಲಾ ಮಹಿಳಾ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಲಾಯಿತು.

ದೇಶದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಿ ಎಂದು ಜಿಪಂ ಸದಸ್ಯೆ ಶಾಂತಲಾ ರಾಜಣ್ಣ ನೇತೃತ್ವದಲ್ಲಿ ವಿವಿಧ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಘೋಷಣೆ ಕೂಗಿದರು.

ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಶಾಂತಲಾ ರಾಜಣ್ಣ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರದ್ದು ರಾಮರಾಜ್ಯವಲ್ಲ. ಅದು ಗೂಂಡಾರಾಜ್ಯ. ಹಾಥರಸ್ ಸಂತ್ರಸ್ತೆ ಕುಟುಂಬಕ್ಕೆ ರಕ್ಷಣೆ ನೀಡಬೇಕಾದ ಅಲ್ಲಿನ ಸರ್ಕಾರ, ಆರೋಪಿಗಳಿಗೆ ರಕ್ಷಣೆ ನೀಡುವ ಮೂಲಕ ಮಹಿಳಾ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುವತಿಯ ಶವಸಂಸ್ಕಾರದಲ್ಲೂ ಭಾಗಿಯಾಗಲು ಸಂತ್ರಸ್ತೆ ಕುಟುಂಬಕ್ಕೆ ಅವಕಾಶ ನೀಡದೆ, ಪೊಲೀಸರೇ ರಾತ್ರೋರಾತ್ರಿ ದಹನ ಮಾಡುವ ಮೂಲಕ ಸಾಕ್ಷೃ ನಾಶಪಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಬೇಕು. ಸರ್ಕಾರ ಕೂಡಲೇ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ರಾಮರಾಜ್ಯ ಸ್ಥಾಪಿಸುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ತದ್ವಿರುದ್ಧ ಆಡಳಿತ ನೀಡುತ್ತಿದೆ. ಸಂತ್ರಸ್ತೆ ಯುವತಿ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಮಧುಗಿರಿ ತಾಪಂ ಅಧ್ಯಕ್ಷೆ ಇಂದಿರಾ ದೇನಾನಾಯಕ್ ಆಗ್ರಹಿಸಿದರು.

ಮುಖಂಡ ಅರ್ಜುನ್ ಪಾಳ್ಳೇಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net