ಆನ್‌ಲೈನ್ ಶಿಕ್ಷಣಕ್ಕೆ ಹನೇಹಳ್ಳಿ ಮೇಲ್ಪಂಕ್ತಿ

HANEHALLI NEW
Published on

ಉಡುಪಿ: ಆನ್‌ಲೈನ್ ಶಿಕ್ಷಣಕ್ಕೆ ಅಗತ್ಯವಾಗಿರುವ ಮೊಬೈಲ್, ಟಿವಿ, ಅಂತರ್ಜಾಲ ವ್ಯವಸ್ಥೆ ಇಲ್ಲದ ವಿದ್ಯಾರ್ಥಿಗಳ ನೆರವಿಗೆ ಬಂದಿರುವ ಬ್ರಹ್ಮಾವರ ತಾಲೂಕಿನ ಹನೇಹಳ್ಳಿ ಗ್ರಾಮ ಪಂಚಾಯಿತಿ ಇತರ ಸ್ಥಳೀಯಾಡಳಿತಗಳಿಗೆ ಮಾದರಿಯಾಗಿದೆ. ಗ್ರಾಪಂ ಕಚೇರಿಯಲ್ಲೇ ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸಿದ್ದು, ಶನಿವಾರ 9 ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳು ಆರಂಭವಾಗಿದ್ದು, ಜಿಲ್ಲೆಯಲ್ಲಿ ಮೊಬೈಲ್ ಸಂಪರ್ಕ ಮತ್ತು ಚಂದನ ವಾಹಿನಿ ಸೌಲಭ್ಯವಿಲ್ಲದ ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಶಿಕ್ಷಣ ಇಲಾಖೆ ಪತ್ತೆ ಮಾಡಿತ್ತು. ಸಾವಿರಾರು ಬಡವರ್ಗದ ವಿದ್ಯಾರ್ಥಿಗಳು ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗುತ್ತಿರುವ ಬಗ್ಗೆ ‘ವಿಜಯವಾಣಿ’ ಜುಲೈ 2ರಂದು ‘ಕೈಗೆಟಕದ ಆನ್‌ಲೈನ್ ಶಿಕ್ಷಣ’ ಎಂಬ ವಿಶೇಷ ವರದಿ ಪ್ರಕಟಿಸಿತ್ತು.

ವರದಿ ಗಮನಿಸಿದ ಹನೇಹಳ್ಳಿ ಗ್ರಾಪಂ ಆಡಳಿತವು ನೆಟ್‌ವರ್ಕ್, ಮೊಬೈಲ್, ಟಿವಿ ಸಂಪರ್ಕ ಇಲ್ಲದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಚಿಂತನೆ ನಡೆಸಿತ್ತು. ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಸದಸ್ಯರು, ಪಿಡಿಒ ಆರುಂಧತಿ ಏಸುಮನೆ, ಸಿಬ್ಬಂದಿ ವಿದ್ಯಾರ್ಥಿಗಳಿಗೆ ಸಹಕರಿಸಲು ನಿರ್ಧರಿಸಿ, ಪಂಚಾಯಿತಿ ಕಚೇರಿಯಲ್ಲಿ ಅಂತರ್ಜಾಲ ಸಂಪರ್ಕ ಸಹಿತ ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸಿದ್ದಾರೆ. ಶನಿವಾರ ಬೆಳಗ್ಗೆ 10ರಿಂದ 12.30ರವರೆಗೆ ಪ್ರೌಢಶಾಲೆಗಳ 9 ವಿದ್ಯಾರ್ಥಿಗಳಿಗೆ ಇದರಿಂದ ಆನ್‌ಲೈನ್ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಮೊಬೈಲ್, ಚಂದನವಾಹಿನಿ, ನೆಟ್‌ವರ್ಕ್ ಸೌಕರ್ಯವಿಲ್ಲದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣಕ್ಕೆ ಸಮಸ್ಯೆಯಾಗದಂತೆ ಅನುಕೂಲ ಕಲ್ಪಿಸಲು ಬದ್ಧವಿರುವುದಾಗಿ ಹನೇಹಳ್ಳಿ ಗ್ರಾ.ಪಂ ಆಡಳಿತ ವಿಜಯವಾಣಿಗೆ ತಿಳಿಸಿದೆ.

ಜಿಲ್ಲೆಯ ಎಲ್ಲ ಗ್ರಾಪಂಗಳಿಗೆ ಸೂಚನೆ
ಆನ್‌ಲೈನ್ ಶಿಕ್ಷಣಕ್ಕೆ ಸಮಸ್ಯೆಯಾಗಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅನುಕೂಲ ಮಾಡಿಕೊಡುವ ಹನೇಹಳ್ಳಿ ಗ್ರಾಮ ಪಂಚಾಯಿತಿ ಮಾದರಿ ನಡೆಯನ್ನು ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಅನುಸರಿಸಲು ಸೂಚನೆ ನೀಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ.ನವೀನ್ ಭಟ್ ವೈ. ತಿಳಿಸಿದ್ದಾರೆ. ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಚ್.ಎಸ್. ನಾಗೂರ ‘ವಿಜಯವಾಣಿ’ ಜತೆ ಮಾತನಾಡಿ, ಹನೇಹಳ್ಳಿ ಗ್ರಾಪಂನಲ್ಲಿ ಕೈಗೊಂಡಿರುವ ಕಾರ್ಯ ಮಾದರಿ. ಜಿಲ್ಲೆಯಲ್ಲಿರುವ ಸಮೂಹ ಶಿಕ್ಷಣ ಸಂಪನ್ಮೂಲ ವ್ಯಕ್ತಿ 84 ಅಧಿಕಾರಿಗಳು ಮತ್ತು ಬಿಇಒಗಳಿಗೆ ತಮ್ಮ ವ್ಯಾಪ್ತಿಯ ಗ್ರಾ.ಪಂಗಳ ಜತೆ ಮಾತುಕತೆ ನಡೆಸಿ, ಇಂತಹ ವಿದ್ಯಾರ್ಥಿಗಳಿಗೆ ಹನೇಹಳ್ಳಿ ಮಾದರಿಯಲ್ಲಿ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿದೆ. ಸೌಕರ್ಯ ವಂಚಿತ ಶಾಲಾವಾರು ವಿದ್ಯಾರ್ಥಿಗಳ ಪಟ್ಟಿಯನ್ನು ಗ್ರಾ.ಪಂಗಳಿಗೆ ನೀಡಲಾಗುವುದು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net