

ಗೋಕರ್ಣ: 26 ವರ್ಷಗಳ ತರುವಾಯ ಪುರಾಣ ಪ್ರಸಿದ್ಧ ಗೋಕರ್ಣಕ್ಕೆಗ್ರಾಮದೇವತೆ ಮೆರವಣಿಗೆ ಶುಕ್ರವಾರ ಸಂಜೆ ಆಗಮಿಸಿತು.
ಈ ಅಪರೂಪದ ಸನ್ನಿವೇಶ ಕಣ್ತುಂಬಿಕೊಳ್ಳಲು ವಿವಿಧ ಗ್ರಾಮಗಳಿಂದ ಸಹಸ್ರಾರು ಭಕ್ತರ ದಂಡು ಆಗಮಿಸಿತ್ತು. ಕಾಲ್ನಡಿಗೆಯಲ್ಲಿ ಮಂಗಳವಾದ್ಯದೊಂದಿಗೆ ಪರಿವಾರ ಸಮೇತ ಆಗಮಿಸಿದ ಶ್ರೀಗ್ರಾಮದೇವಿ ಕಳಸದೊಂದಿಗೆ ಭವ್ಯವಾದ ಮೆರವಣಿಗೆಯಲ್ಲಿ ಬಿಜಯಂಗೈಯ್ಯಿತು. 1998ರ ನಂತರ ನಿಂತು ಹೋಗಿದ್ದ ಪಾರಂಪರಿಕ ಸಂಪ್ರದಾಯಕ್ಕೆ ಹತ್ತಿರದ ಹನೇಹಳ್ಳಿಯ ಶ್ರೀಗಾಮದೇವಿ ಕಳಸ ಗೋಕರ್ಣ ಕ್ಷೇತ್ರದ ವಿವಿಧ ಮಂದಿರಗಳಿಗೆ ಭೇಟಿ ನೀಡುವ ಮೂಲಕ ಪುರಾತನ ಇತಿಹಾಸಕ್ಕೆ ಮರು ಚಾಲನೆ ನೀಡಲಾಯಿತು.
ಕಳಸವು ಪ್ರಧಾನ ಪಾತ್ರಿ ದಯಾನಂದ ಗುನುಗ ಅವರ ನೇತೃತ್ವದಲ್ಲಿ ಕಟ್ಟಳೆಯಂತೆ ಮೊದಲು ಶ್ರೀಮಣಿಭದ್ರ ಮಂದಿರಕ್ಕೆ ಆಗಮಿಸಿ ಅರ್ಚನೆ, ಪ್ರಾರ್ಥನೆ ಮತ್ತು ಮಹಾಮಂಗಳಾರತಿ ಸ್ವೀಕರಿಸಿತು. ನಂತರ ಕ್ಷೇತ್ರದ ಪ್ರಧಾನ ದೇವರಾದ ಮಹಾಗಣಪತಿ, ಮಹಾಬಲೇಶ್ವರ ಮತ್ತು ಭದ್ರಕಾಳಿ ದೇವರ ದರ್ಶನ ಮಾಡಿ ಸೇವಾರಾಧನೆ ಪಡೆಯಿತು. ಕಳಸ ಸಂಚರಿಸಿದ ಮಾರ್ಗದ ಮನೆಗಳಲ್ಲಿ ಮಂಗಳಾರತಿ ಮತ್ತು ಕಾಣಿಕೆ ಸಮರ್ಪಿಸಿ ಸ್ವಾಗತಿಸಲಾಯಿತು. ಎಲ್ಲ ಮಂದಿರಗಳ ಭೇಟಿಯ ನಂತರ ಕಳಸ ಮೆರವಣಿಗೆಯು ಸ್ವಸ್ಥಾನಕ್ಕೆ ಪಯಣಿಸಿತು. ಭಾರಿ ಸಂಖ್ಯೆಯಲ್ಲಿ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ ಕಾರಣ ಮುಖ್ಯರಸ್ತೆ ಮತ್ತು ಮಂದಿರಗಳಲ್ಲಿ ಜನದಟ್ಟಣೆ ಉಂಟಾಯಿತು.
ಮೇ21 ರಂದು ಬಂಡಿತೇರು ಉತ್ಸವ ಮತ್ತು 22ರಂದು ಹರಕೆ ಹಾಗೂ ಕಾಣಿಕೆ ಸಮರ್ಪಣೆಯೊಂದಿಗೆ ವಾರ್ಷಿಕ ಬಂಡಿಹಬ್ಬ ಮಂಗಳವಾಗುವುದು.