

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಮಂಟೂರು ರಸ್ತೆಯಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ವಿುಸಲಾಗುತ್ತಿರುವ 1300 ಮನೆಗಳನ್ನು ಶೀಘ್ರದಲ್ಲಿಯೇ ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗುವುದು ಎಂದು ಮಂಡಳಿಯ ಅಧ್ಯಕ್ಷ, ಹು-ಧಾ ಪೂರ್ವ ಶಾಸಕ ಪ್ರಸಾದ ಅಬ್ಬಯ್ಯ ತಿಳಿಸಿದರು.
ಶನಿವಾರ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದಲ್ಲಿ ಹೆಚ್ಚಿನ ಜನರು ವಾಸಿಸುತ್ತಿರುವುದರಿಂದ ಅವರಿಗಾಗಿ ಅತ್ಯುತ್ತಮ ವಸತಿ ಮನೆಗಳನ್ನು ನಿರ್ಮಾಣ ಮಾಡಬೇಕು ಎಂಬ ಕನಸು ಹೊಂದಲಾಗಿತ್ತು. ಕಡು ಬಡವರಿಗೆ, ಕೊಳೆಗೇರಿ ನಿವಾಸಿಗಳಿಗೆ ವಸತಿ ಮನೆಗಳು, ಮೂಲ ಸೌಕರ್ಯ ಮತ್ತು ಹಕ್ಕು ಪತ್ರಗಳನ್ನು ವಿತರಣೆ ಮಾಡುವ ಉದ್ದೇಶವಿದೆ. ಜಿಲ್ಲೆಯಲ್ಲಿ 7,600 ಮನೆಗಳ ನಿರ್ಮಾಣ ಕಾಮಗಾರಿ ನಡೆಯುತ್ತಿವೆ ಎಂದರು.
ಮಂಡಳಿಯಿಅದ ಮೊದಲ ಹಂತದಲ್ಲಿ ನಿರ್ವಣಗೊಂಡ 36,700 ಮನೆಗಳನ್ನು ಫೆಬ್ರವರಿ ತಿಂಗಳಿನಲ್ಲಿ ಮುಖ್ಯಮಂತ್ರಿಯವರು ಹಸ್ತಾಂತರಿಸಿದ್ದಾರೆ. ಎರಡನೇ ಹಂತದಲ್ಲಿ ಸುಮಾರು 32,600 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ತಿಂಗಳಲ್ಲಿ ಈ ಮನೆಗಳನ್ನು ಮುಖ್ಯಮಂತ್ರಿಯವರಿಂದ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು. ಆಗ ಇಲ್ಲಿನ 1300 ಮನೆಗಳ ಪೈಕಿ 550 ಮನೆಗಳನ್ನು ಫಲಾನುಭವಿಗಳಿಗೆ ನೀಡಲಾಗುವುದು ಎಂದು ಹೇಳಿದರು.
ಜಿಲ್ಲಾ ಮಟ್ಟದ ಸ್ಲಂ ನಿವಾಸಿಗಳ ಸಭೆ
ಜಿಲ್ಲೆಯಲ್ಲಿ ವಾಸ ಮಾಡುತ್ತಿರುವ ಸ್ಲಂ ನಿವಾಸಿಗಳ ಮನೆಗಳಿಗೆ ಭೇಟಿ ನೀಡಿ, ಅವರ ಸಮಸ್ಯೆಗಳನ್ನು ಆಲಿಸಲಾಗುವುದು. ಹಕ್ಕು ಪತ್ರ ವಿತರಣೆಯಲ್ಲಿನ ತೊಂದರೆಗಳನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಸ್ಲಂ ನಿವಾಸಿಗಳ ಸಭೆಯನ್ನು ಮುಂದಿನ ತಿಂಗಳಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.
ಈ ಜಾಗದಲ್ಲಿ 30 ಬೆಡ್ಗಳ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಲು ಚಿಂತನೆ ನಡೆಸಲಾಗಿದೆ. ಅದಕ್ಕಾಗಿ 30 ಗುಂಟೆ ಜಾಗವನ್ನು ಮೀಸಲಿಡಲಾಗಿದೆ. ಈ ಕುರಿತು ಪ್ರಸ್ತಾವನೆಯನ್ನು ಮಂಡಳಿಯಿಅದ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಸ್ಮಾರ್ಟ್ಸಿಟಿ ಯೋಜನೆಯಡಿ ಹುಬ್ಬಳ್ಳಿಯಲ್ಲಿ ನಿರ್ವಿುಸಿರುವ ಜನತಾ ಬಜಾರ ಹಾಗೂ ಗಣೇಶ ಪೇಟೆಯ ಮೀನು ಮಾರುಕಟ್ಟೆ ಸಂಕೀರ್ಣದಲ್ಲಿ ಶೀಘ್ರದಲ್ಲಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅನುಮತಿ ನೀಡಲಾಗುವುದು ಎಂದರು.
ಇದೇ ವೇಳೆ ಶಾಸಕ ಅಬ್ಬಯ್ಯ ರಾಜೀವ ಗಾಂಧಿ ವಸತಿ ಯೋಜನೆಯಡಿ 700 ಮನೆಗಳ ನಿರ್ಮಾಣ ಕಾಮಗಾರಿಯನ್ನು ಸಹ ವೀಕ್ಷಣೆ ಮಾಡಿದರು. ಮಂಡಳಿಯ ಎಇಇ ಪ್ರವೀಣ, ಎಇ ಬಸವರಾಜ, ರಾಜು ಪಾಟೀಲ, ಇತರರು ಇದ್ದರು.