

ರಟ್ಟಿಹಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಿರೇಕೆರೂರ ತಾಲೂಕಿನ ಹಂಸಭಾವಿ, ಕೋಡ ಮತ್ತು ರಟ್ಟಿಹಳ್ಳಿ ತಾಲೂಕಿನಲ್ಲಿ ಕ್ಯಾತನಕೇರಿ ಗ್ರಾಮದ ಅರ್ಹ ಮೂವರು ಫಲಾನುಭವಿಗಳಿಗೆ ವಾತ್ಸಲ್ಯ ಮನೆಗಳನ್ನು ಹಸ್ತಾಂತರಿಸಲಾಗಿದೆ ಎಂದು ಯೋಜನೆ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಹೇಳಿದರು.
ತಾಲೂಕಿನ ಕ್ಯಾತನಕೇರಿ ಗ್ರಾಮದಲ್ಲಿ ಮಂಗಳವಾರ ಫಲಾನುಭವಿ ರಾಧಮ್ಮ ಅವರಿಗೆ ವಾತ್ಸಲ್ಯ ಮನೆ ಹಸ್ತಾಂತರಿಸಿ ಅವರು ಮಾತನಾಡಿದರು. ಈ ಯೋಜನೆಯಡಿ ಗ್ರಾಮಸ್ಥರಿಂದ ನಿರ್ಗತಿಕರ ಮಾಹಿತಿ ಪಡೆದು ಯೋಜನೆ ಮೂಲಕ ಅವರ ಸ್ವಂತ ನಿವೇಶನ ಅಥವಾ ಇತರೆ ಯಾವುದೇ ದಾನದ ಭೂಮಿಯಲ್ಲಿ ಸುಮಾರು 1 ಲಕ್ಷ ರೂ. ವೆಚ್ಚದಲ್ಲಿ ವಾತ್ಸಲ್ಯ ಮನೆ ನಿರ್ವಿುಸಿ ಹಸ್ತಾಂತರಿಸಲಾಗುವುದು. ಈ ಯೋಜನೆಯ ಬಗ್ಗೆ ಮಾಹಿತಿ ಪಡೆದು ಸದುಪಯೋಗ ಪಡೆದುಕೊಳ್ಳಬಹುದು ಎಂದರು.
ತಾಲೂಕು ಯೋಜನಾಧಿಕಾರಿ ಮಂಜುನಾಥ ಎಂ. ಮಾತನಾಡಿದರು. ವಲಯ ಮೇಲ್ವಿಚಾರಕ ಚೆನ್ನಪ್ಪ ಎಸ್.ಎಂ., ಸಮನ್ವಯಾಧಿಕಾರಿ ಶಶಿಕಲಾ, ಒಕ್ಕೂಟ ಪದಾಧಿಕಾರಿ ವಿಜಯಾ, ಪುಷ್ಪಾ ನಾಗರತ್ನ, ಗ್ರಾಪಂ ಸದಸ್ಯ ನಾಗಪ್ಪ ಮಡ್ಲೂರು, ಗ್ರಾಮಸ್ಥರಾದ ಕುಬೇರಪ್ಪ ಬೀಜಗೇರಿ, ಗದಿಗೆಪ್ಪ ಸಾವಜ್ಜಿ, ಸೇವಾ ಪ್ರತಿನಿಧಿ ಮಂಜುನಾಥ ಬಸಟ್ಟೇರ, ವಿದ್ಯಾ ಹುಲ್ಲತ್ತಿ, ಇತರರು ಉಪಸ್ಥಿತರಿದ್ದರು.