ಅಶಕ್ತ ಕುಟುಂಬಕ್ಕೆ ಬೆಳಕು ಚೆಲ್ಲುವ ಸತ್ಕಾರ್ಯ : ಡಾ.ಅರುಣ್ ಉಳ್ಳಾಲ್ ಶ್ಲಾಘನೆ

New Project (24)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಯುವಕರು ವಿಭಿನ್ನ ರೀತಿಯಲ್ಲಿ ಸಮಾಜದ ಕಷ್ಟ, ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯ. ಟೀಮ್ ಹನುಮಾನ್ ಸಂಘಟನೆ ಸದಸ್ಯರು ಬೆಳಕಿನ ತಿಂಗಳಲ್ಲಿ ಅಶಕ್ತ ಕುಟುಂಬಕ್ಕೆ ಬೆಳಕು ಚೆಲ್ಲುವ ಸತ್ಕಾರ್ಯ ಮಾಡಿದ್ದಾರೆ ಎಂದು ಮಂಗಳೂರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಉಪನ್ಯಾಸಕ ಡಾ.ಅರುಣ್ ಉಳ್ಳಾಲ್ ಹೇಳಿದರು.

ಉಳ್ಳಾಲ ಧರ್ಮನಗರದ ನಾಗಬ್ರಹ್ಮ ಪರಿವಾರ ದೈವಗಳ ಕ್ಷೇತ್ರದಲ್ಲಿ ಭಾನುವಾರ ಧರ್ಮನಗರ ‘ಟೀಮ್ ಹನುಮಾನ್’ ಸಂಘಟನೆ ಸದಸ್ಯರು ‘ಭವತೀ ಭಿಕ್ಷಾಂ ದೇಹಿ’ ಪರಿಕಲ್ಪನೆಯಡಿ ನವರಾತ್ರಿಯಂದು ಯಕ್ಷ ವೇಷ ಧರಿಸಿ ಸಂಗ್ರಹಿಸಿದ ಹಣ ಫಲಾನುಭವಿಗಳಿಗೆ ಹಸ್ತಾಂತರಿಸಿ ಮಾತನಾಡಿದರು.

ಚೀರುಂಭ ಭಗವತೀ ಕ್ಷೇತ್ರದ ಪ್ರಧಾನ ಅರ್ಚಕ ಮಂಜಪ್ಪ ಕಾರ್ನವರ್ ಟೀಮ್ ಹನುಮಾನ್ ಸಂಘಟನೆ ನೂತನ ಕಾರ್ಯಾಲಯ ‘ಹನುಮಾನ್ ಕುಠೀರ’ ಉದ್ಘಾಟಿಸಿದರು. ಶ್ರೀ ಕ್ಷೇತ್ರ ಒಂಬತ್ತುಕೆರೆಯ ಅಧ್ಯಕ್ಷ ಶರತ್ ಗಟ್ಟಿ ಸೋಮೇಶ್ವರ, ಸೋಮನಾಥ ಫ್ರೆಂಡ್ಸ್ ಅಧ್ಯಕ್ಷ ಸತೀಶ್ ನಾಯಕ್, ಧರ್ಮನಗರ ನಾಗಬನದ ಅಧ್ಯಕ್ಷ ನಾಗೇಶ್ ಉಳ್ಳಾಲ್, ರಾಹುಗುಳಿಗ ಬನದ ಅಧ್ಯಕ್ಷ ಭಾಸ್ಕರ ತೆಂಗಿನ ಹಿತ್ಲು, ಮಹಿಳಾ ಸಂಘದ ಅಧ್ಯಕ್ಷೆ ರತಿ ಶಂಕರ್, ಯಕ್ಷವೇಷ ಕಲಾವಿದ ವಿಘ್ನೇಶ್ ಕುಮಾರ್ ಬೋಳೂರು, ಗುತ್ತಿಗೆದಾರ ರಿಚರ್ಡ್ ವೇಗಸ್, ಬಿಜೆಪಿ ಮಂಗಳೂರು ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಮಾಧವಿ ಉಳ್ಳಾಲ್, ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಮಿತ ಅಶ್ವಿನ್, ಕಾಂಗ್ರೆಸ್ ಮುಖಂಡ ನವನೀತ್ ಉಳ್ಳಾಲ್, ಸ್ವಾಗತ್ ಫ್ರೆಂಡ್ಸ್ ಅಧ್ಯಕ್ಷ ಧನರಾಜ್, ಟೀಮ್ ಹನುಮಾನ್ ಅಧ್ಯಕ್ಷ ಸಂಪತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಟೀಮ್ ಹನುಮಾನ್ ಸದಸ್ಯ ತಿಲಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೃಥ್ವಿ ಕಾರ್ಯಕ್ರಮ ನಿರೂಪಿಸಿದರು.

ಚೆಕ್ ವಿತರಣೆ

ಕಳೆದ ನವರಾತ್ರಿಯಂದು ಟೀಮ್ ಹನುಮಾನ್ ಸಂಘಟನೆ ಸದಸ್ಯರು ಭವತೀ ಭಿಕ್ಷಾಂ ದೇಹಿ ಪರಿಕಲ್ಪನೆಯಡಿ ಯಕ್ಷವೇಷ ಧರಿಸಿ ಸಂಗ್ರಹಿಸಿದ್ದ 1,05,905 ರೂ. ಸಹಾಯಧನ ಚೆಕ್ ಅಪಘಾತಕ್ಕೀಡಾಗಿ ಹಾಸಿಗೆ ಹಿಡಿದಿರುವ ಕಾರ್ಕಳದ ನಾರಾವಿ ನಿವಾಸಿ ಶ್ರವಣ್ ಅವರ ಪಾಲಕರಿಗೆ ಹಸ್ತಾಂತರಿಸಲಾಯಿತು. ಅಲ್ಲದೆ ಸ್ಥಳೀಯ ಸಂಘಟನೆ ಸ್ವಾಗತ್ ಫ್ರೆಂಡ್ಸ್ ಆಂಬುಲೆನ್ಸ್ ಸೇವೆ ಹಾಗೂ ಮಾಸ್ತಿಕಟ್ಟೆ ವೀರಾಂಜನೇಯ ವ್ಯಾಯಾಮ ಶಾಲಾ ಕಾಮಗಾರಿಗೆ ಸಹಾಯಧನದ ಚೆಕ್ ಹಸ್ತಾಂತರಿಸಲಾಯಿತು. ಉಳ್ಳಾಲ ಬೈಲ್ ಅಂಗನವಾಡಿ ಕೇಂದ್ರಕ್ಕೆ ಎರಡು ಗಡಿಯಾರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net