ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಶಾಲಾ ವಾಹನ ಹಸ್ತಾಂತರ

schoolvan
ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ವತಿಯಿಂದ ದತ್ತು ಸ್ವೀಕಾರ ಪಡೆದ ಬಿಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಗೋವಿಂದ ಬಾಬು ಪೂಜಾರಿ ಶಾಲಾ ವಾಹನ ಹಸ್ತಾಂತರಿಸಿದರು
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಸರ್ಕಾರಿ ಶಾಲೆಗಳ ಉಳಿವಿಗೆ ಹಳೇ ವಿದ್ಯಾರ್ಥಿಗಳು ಹಾಗೂ ಊರಿನ ಶಿಕ್ಷಣ ಪ್ರೇಮಿಗಳು ಕೈಜೋಡಿಸಬೇಕಿದೆ. ಈಗಾಗಲೇ ಬಿಜೂರು ಶಾಲೆಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಡಾ.ಗೋವಿಂದ ಬಾಬು ಪೂಜಾರಿ ಹೇಳಿದರು.

ಟ್ರಸ್ಟ್ ವತಿಯಿಂದ ದತ್ತು ಸ್ವೀಕಾರ ಪಡೆದ ಬಿಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಲಾ ವಾಹನ ಹಸ್ತಾಂತರಿಸಿ ಮಾತನಾಡಿದರು.
ಇಂದು ಇಂಗ್ಲೀಷ್ ಮಾಧ್ಯಮ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳೇ ಪೈಪೋಟಿ ನೀಡುತ್ತಿರುವುದು ಹೆಮ್ಮಯ ವಿಷಯ. ಮುಂದಿನ ದಿನಗಳಲ್ಲಿ ನೋಟ್‌ಬುಕ್, ಸಮವಸ್ತ್ರ, ಇಂಗ್ಲೀಷ್ ಮಾಧ್ಯಮದ ಪಠ್ಯ ಪುಸ್ತಕ ನೀಡಲಾಗುವುದು. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದ್ದು, ನುರಿತ ಶಿಕ್ಷಕರನ್ನು ನೇಮಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಎಸ್‌ಡಿಎಂಸಿ ಅಧ್ಯಕ್ಷೆ ಶಾರದಾ ದೇವಾಡಿಗ, ಬಿಜೂರು ಗ್ರಾಪಂ ಮಾಜಿ ಅಧ್ಯಕ್ಷ ರಮೇಶ ವಿ.ದೇವಾಡಿಗ, ಗ್ರಾಪಂ ಸದಸ್ಯ ರಾಜೇಂದ್ರ ಬಿಜೂರು, ಜಯರಾಮ ಶೆಟ್ಟಿ ಬಿಜೂರು, ಅಲಕಾ ನಾಗರಾಜ ಬಿಜೂರು, ನಾಗರಾಜ ಪಿ.ಯಡ್ತರೆ, ಹಳೇ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಕೃಷ್ಣ ದೇವಾಡಿಗ, ಸಾಂಸ್ಕೃತಿಕ ಕಾರ್ಯದರ್ಶಿ ನಂದೀಶ ದೇವಾಡಿಗ, ಉಮೇಶ ಮೊಗವೀರ, ಚಾಲಕ ನವೀನ್ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಮಂಜುನಾಥ ಎಸ್. ಸ್ವಾಗತಿಸಿ, ಶಿಕ್ಷಕಿ ಮನೋರಮಾ ಕಾರ್ಯಕ್ರಮ ನಿರ್ವಹಿಸಿದರು.

ಮಗು ದೇವರು ಕೊಟ್ಟ ದೇಣಿಗೆ. ಮಕ್ಕಳಿಗೆ ಶಿಕ್ಷಣ ಶಿಕ್ಷೆಯಾಗಬಾರದು. ನಿಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಕೆ ಮಾಡಬೇಡಿ. ಹೆತ್ತವರು ತಮ್ಮ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಆ ಮಾರ್ಗದಲ್ಲಿಯೇ ಅವರನ್ನು ಮುನ್ನಡೆಸಿ. ಇದರಿಂದ ಮಕ್ಕಳ ಭವಿಷ್ಯ ಉತ್ತಮಗೊಳಿಸಲು ಸಾಧ್ಯವಾಗುತ್ತದೆ.-ಡಾ.ಗೋವಿಂದ ಬಾಬು ಪೂಜಾರಿಮ್ಯಾನೇಜಿಂಗ್ ಟ್ರಸ್ಟಿ, ಶ್ರೀ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net