ಚಿನ್ನಾಭರಣ, ನಗದು ಇದ್ದ ಪರ್ಸ್ ಹಸ್ತಾಂತರ

RemasterDirector_1a5c03258
ಬಸ್ಸಿನಲ್ಲಿ ಪ್ರಯಾಣಿಸುವ ವೇಳೆ ಪರ್ಸ್ ಮರೆತು ಇಳಿದಿದ್ದ ಮಹಿಳಾ ಪ್ರಯಾಣಿಕರಿಗೆ ನಿರ್ವಾಹಕ ಕೃಷ್ಣಮೂರ್ತಿ ಪರ್ಸ್ ಹಿಂದಿರುಗಿಸಿದರು.
Published on

ಪಿರಿಯಾಪಟ್ಟಣ: ಪ್ರಯಾಣಿಕರೊಬ್ಬರು ಬಸ್‌ನಲ್ಲಿ ಮರೆತು ಹೋಗಿದ್ದ ಚಿನ್ನಾಭರಣ ಹಾಗೂ ನಗದು ಇದ್ದ ಪರ್ಸನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ನಿರ್ವಾಹಕ ಕೃಷ್ಣಮೂರ್ತಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಪಿರಿಯಾಪಟ್ಟಣ ಸಾರಿಗೆ ಘಟಕದ ಚಾಲಕ ಕಮ್ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೃಷ್ಣಮೂರ್ತಿ ಅವರು ಶುಕ್ರವಾರ ಮೈಸೂರಿನಿಂದ ಪಿರಿಯಾಪಟ್ಟಣಕ್ಕೆ ಚಾಲಕ ಕೆ.ಟಿ.ಮಣಿಕಂಠ ಅವರ ಜತೆ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಮಹಿಳಾ ಪ್ರಯಾಣಿಕರೊಬ್ಬರು ತಾವು ಕುಳಿತಿದ್ದ ಸೀಟ್‌ನಲ್ಲಿ ಪರ್ಸ್ ಮರೆತು ಪಿರಿಯಾಪಟ್ಟಣದ ಕನ್ನಂಬಾಡಿಯಮ್ಮ ದೇವಾಲಯ ಬಳಿಯ ನಿಲ್ದಾಣದಲ್ಲಿ ಇಳಿದಿದ್ದಾರೆ. ಬಸ್ ಪಟ್ಟಣದ ನಿಲ್ದಾಣಕ್ಕೆ ಬಂದು ಪ್ರಯಾಣಿಕರೆಲ್ಲರನ್ನು ಇಳಿಸಿದ ಸಂದರ್ಭ ಸೀಟ್‌ನಲ್ಲಿ ಪರ್ಸ್ ಇರುವುದನ್ನು ಗಮನಿಸಿದ ನಿರ್ವಾಹಕ ಕೃಷ್ಣಮೂರ್ತಿ ತಕ್ಷಣ ಬಸ್ ನಿಲ್ದಾಣದಲ್ಲಿ ಇದ್ದ ಸಂಚಾರ ನಿಯಂತ್ರಕರಿಗೆ ವಿಷಯ ತಿಳಿಸಿ ಪರ್ಸ್ ಕಳೆದುಕೊಂಡಿದ್ದ ಪ್ರಯಾಣಿಕರ ಹುಡುಕಾಟದಲ್ಲಿ ತೊಡಗಿದ್ದರು. ಈ ವೇಳೆ ಮಹಿಳೆಯೊಬ್ಬರು ಬಸ್ ನಿಲ್ದಾಣಕ್ಕೆ ಆಗಮಿಸಿ ಪರ್ಸ್ ಕಳೆದುಕೊಂಡಿದ್ದ ವಿಚಾರ ತಿಳಿಸಿದಾಗ ಪರ್ಸ್‌ನಲ್ಲಿ ಇದ್ದ ಒಡವೆ ಹಾಗೂ ನಗದು ಬಗ್ಗೆ ಮಾಹಿತಿ ಪಡೆದುಕೊಂಡು ಪರಿಶೀಲಿಸಿದ ನಿರ್ವಾಹಕರಾದ ಕೃಷ್ಣಮೂರ್ತಿ ಅಂದಾಜು 3 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣವನ್ನು ಮೂಲ ವಾರಸುದಾರರಿಗೆ ಹಿಂದಿರುಗಿಸಿದರು.

ನಿರ್ವಾಹಕ ಕೃಷ್ಣಮೂರ್ತಿ ಅವರ ಪ್ರಾಮಾಣಿಕ ಕರ್ತವ್ಯಕ್ಕೆ ಘಟಕ ವ್ಯವಸ್ಥಾಪಕರಾದ ದರ್ಶನ್ ರಾಮಚಂದ್, ಸಂಚಾರ ನಿಯಂತ್ರಕರಾದ ಚಂದ್ರಶೇಖರ್, ನಂಜುಂಡಸ್ವಾಮಿ ಸೇರಿದಂತೆ ಚಾಲಕ ನಿರ್ವಾಹಕರು ಹಾಗೂ ಘಟಕದ ಸಿಬ್ಬಂದಿ ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net