

ಕೆ.ಆರ್.ಪೇಟೆ: ಪಟ್ಟಣದ ಗ್ರಾಮ ದೇವತೆ ಶ್ರೀ ದೊಡ್ಡಕೆರೆಯಮ್ಮ ದೇವಿಯ ರಥ ನಿರ್ಮಾಣ ಕಾರ್ಯಕ್ಕೆ ತಾಲೂಕು ಕಾಂಗ್ರೆಸ್ ಮುಖಂಡ ಹಾಗೂ ಮಿತ್ರ ಫೌಂಡೇಷನ್ ಅಧ್ಯಕ್ಷ ವಿಜಯರಾಮೇಗೌಡ 1.08 ಲಕ್ಷ ರೂ.ಗಳ ವೈಯಕ್ತಿಕ ಸಹಾಯ ಧನದ ಚೆಕ್ ನೀಡಿ ರಥ ನಿರ್ಮಾಣ ಕಾರ್ಯಕ್ಕೆ ಶುಭ ಕೋರಿದರು.
ಪಟ್ಟಣದ ಶ್ರವಣಬೆಳಗೊಳ ರಸ್ತೆಯಲ್ಲಿರುವ ಮುಖಂಡ ಪಟೇಲ್ ಚಂದ್ರೇಗೌಡರ ನಿವಾಸಕ್ಕೆ ಮಂಗಳವಾರ ಆಗಮಿಸಿದ ವಿಜಯರಾಮೇಗೌಡ ಪುರ ಪ್ರಮುಖರ ಸಮ್ಮುಖದಲ್ಲಿ ರಥ ನಿರ್ಮಾಣ ಸಮಿತಿಗೆ ನೆರವಿನ ಚೆಕ್ ನೀಡಿದರು.
ವಿಜಯರಾಮೇಗೌಡ ಮಾತನಾಡಿ, ಕೆ.ಆರ್.ಪೇಟೆ ಪಟ್ಟಣ ಇಂದು ವಿಸ್ತಾರವಾಗಿ ಬೆಳೆಯುತ್ತಿದ್ದರೂ ಇಲ್ಲಿನ ಪುರ ನಿವಾಸಿಗಳು ನಮ್ಮ ಪಾರಂಪರಿಕ ಹಬ್ಬ ಹರಿದಿನಗಳನ್ನು ಯಾವುದೇ ಜಾತಿ-ಭೇದವಿಲ್ಲದೆ ಒಗ್ಗೂಡಿ ಮಾಡುವ ಮೂಲಕ ಎಲ್ಲರಿಗೂ ಅನುಕರಣೀಯರಾಗಿದ್ದಾರೆ. ದೇವಾಲಯದ ಕಾರ್ಯಗಳು ಎಲ್ಲರನ್ನೂ ಒಗ್ಗೂಡಿಸುತ್ತವೆ. ನಮ್ಮ ಹಿರಿಯರು ತೋರಿಸಿಕೊಟ್ಟಿರುವ ಸನ್ಮಾರ್ಗದಲ್ಲಿ ಯುವ ಸಮುದಾಯ ಸಾಗಬೇಕು. ದೇವಾಲಯಗಳು ಕೇವಲ ಪೂಜಾ ಸ್ಥಳಗಳು ಮಾತ್ರವಲ್ಲ. ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ತೊಟ್ಟಿಲುಗಳು. ದೈವಕ್ಕೆ ಶರಣಾಗಿ ನಾವು ಬದುಕಬೇಕು. ದೇವರ ಕಾರ್ಯದಿಂದ ಮಾನಸಿಕ ನೆಮ್ಮದಿ ದೊರಕುತ್ತದೆ. ಪಟ್ಟಣದ ಗ್ರಾಮ ದೇವತೆಯಾದ ದೊಡ್ಡಕೆರೆಯಮ್ಮ ದೇವಿಯ ರಥ ನಿಮಾಣಕ್ಕೆ ನಮ್ಮ ಮಿತ್ರ ಪೌಂಡೇಷನ್ ವತಿಯಿಂದ ಅಲ್ಪ ಕಾಣಿಕೆಯನ್ನು ನೀಡಿದ್ದೇನೆ. ನನ್ನ ಕಿರು ಕಾಣಿಕೆಯನ್ನು ಸ್ವೀಕರಿಸಿ ದೇವಿಯ ಕಾರ್ಯಕ್ಕೆ ನನ್ನನ್ನು ತೊಡಗಿಸಿಕೊಂಡ ಪುರ ಪ್ರಮುಖರಿಗೆ ನಾನು ಚಿರಋಣಿಯಾಗಿರುತ್ತೇನೆ ಎಂದರು.
ಪುರ ಪ್ರಮುಖರ ಪರವಾಗಿ ಸಹಾಯಧನದ ಚೆಕ್ ಸ್ವೀಕರಿಸಿ ಮಾತನಾಡಿದ ಪಟೇಲ್ ಚಂದ್ರೇಗೌಡ, ವಿಜಯರಾಮೇಗೌಡರ ಸಮಾಜ ಸೇವಾ ಕಾರ್ಯ ಶ್ಲಾಘನೀಯ ಎಂದರು.
ದೊಡ್ಡಕೆರೆಯಮ್ಮ ದೇವಾಲಯ ರಥ ನಿರ್ಮಾಣ ಕಾರ್ಯದ ಮುಂಚೂಣಿಯಲ್ಲಿರುವ ಪುರ ಪ್ರಮುಖರಾದ ಹೆಗ್ಗಡಿ ಕೃಷ್ಣೇಗೌಡ, ಪುರಸಭೆ ಮಾಜಿ ಅಧ್ಯಕ್ಷ ಚಂದ್ರೇಗೌಡ, ಪುರಸಭಾ ಸದಸ್ಯರಾದ ಕೆ.ಆರ್.ರವೀಂದ್ರಬಾಬು, ಡಿ.ಪ್ರೇಮ್‌ಕುಮಾರ್, ಮುಖಂಡರಾದ ಸ್ನೇಹಿತ ರಮೇಶ್, ಜವರೇಗೌಡ, ಹಣ್ಣಿನ ಅಂಗಡಿ ರಾಮಣ್ಣ, ಕಡಲೆಕಾಯಿ ಕೃಷ್ಣೇಗೌಡ, ಯುವ ಮುಖಂಡ ಸಚಿನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ತಾಪಂ ಮಾಜಿ ಸದಸ್ಯ ಮಾಧವಪ್ರಸಾದ್ ಸೇರಿದಂತೆ ಹಲವರು ಹಾಜರಿದ್ದರು.