

ಬೇಲೂರು: ಪುರಸಭೆಗೆ ಸೇರಿದ ಮೂರು ಶೌಚಗೃಹಗಳ ನಿರ್ವಹಣೆಯನ್ನು ಮಂಗಳೂರಿನ ಸಂಸ್ಥೆಗೆ ವಹಿಸಿ ಕೊಡಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಹೇಳಿದರು.
ಪಟ್ಟಣದ ಐಡಿಎಸ್‌ಎಂಟಿ ವಾಣಿಜ್ಯ ಮಳಿಗೆಗಳ ಆವರಣದಲ್ಲಿರುವ ಪುರಸಭೆಗೆ ಸೇರಿದ ಶೌಚಗೃಹ ನಿರ್ವಣೆಗೆ ಮಂಗಳೂರಿನ ಭಾರತಿ ಸಾಮಾಜಿಕ ಸೇವಾ ಶೌಚಾಲಯ ಮತ್ತು ಸ್ನಾನಗೃಹ ಸಂಸ್ಥೆಗೆ ಶುಕ್ರವಾರ ಆದೇಶ ಪತ್ರ ಹಸ್ತಾಂತರಿಸಿ ಮಾತನಾಡಿದ ಅವರು, ಮಲ ಮೂತ್ರ ವಿಸರ್ಜನೆಗೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪಟ್ಟಣ ವ್ಯಾಪ್ತಿಯ ಐಡಿಎಸ್‌ಎಂಟಿ ವಾಣಿಜ್ಯ ಮಳಿಗೆ ಆವರಣ, ದೇಗುಲ ರಸ್ತೆಯ ಮಯೂರ ಹೋಟೆಲ್ ಸಮೀಪ ಹಾಗೂ ಹಳೇ ಮಾರುಕಟ್ಟೆ ಕಟ್ಟಡದ ಮೇಲ್ಭಾಗದಲ್ಲಿರುವ ಶೌಚಗೃಹಗಳು ಸರಿಯಾದ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದ್ದವು. ಇದರಿಂದ ಗ್ರಾಮಾಂತರ ಪ್ರದೇಶದಿಂದ ಪಟ್ಟಣಕ್ಕೆ ಬಂದ ನಾಗರಿಕರು, ಅಂಗಡಿ ಮುಂಗಟ್ಟುಗಳ ವರ್ತಕರು, ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಅಲ್ಲದೆ ಸ್ವಚ್ಛತೆಗೆ ಆದ್ಯತೆ ನೀಡದ ಕಾರಣ ಅಶುಚಿತ್ವದಿಂದ ಕೂಡಿ ಗಬ್ಬು ನಾರುತಿತ್ತು. ಈ ಹಿನ್ನೆಲೆ ಮೂರು ಶೌಚಗೃಹಗಳನ್ನು ನಿರ್ವಹಿಸುತ್ತೇವೆಂದು ಮಂಗಳೂರಿನ ಭಾರತಿ ಸಾಮಾಜಿಕ ಸೇವಾ ಶೌಚ ಮತ್ತು ಸ್ನಾನಗೃಹ ಸಂಸ್ಥೆಯವರು ಮುಂದೆ ಬಂದಿರುವುದರಿಂದ ಅವರಿಗೆ ನಿರ್ವಹಣೆಗೆ ಆದೇಶ ನೀಡಿದ್ದೇವೆ. ಜತೆಗೆ ಇವರು ಪುರಸಭೆಯಿಂದಲೇ ನಿಗದಿ ಪಡಿಸುವ ಹಣವನ್ನು ಮಾತ್ರ ಪಡೆಯಬೇಕು. ಹೆಚ್ಚಿಗೆ ಪಡೆಯುವಂತಿಲ್ಲ ಎಂದು ತಿಳಿಸಿರುವುದಾಗಿ ಹೇಳಿದರು.
ಪುರಸಭೆ ಸದಸ್ಯ ಜಗದೀಶ್, ಅಕ್ರಂ ಷರೀಫ್, ಸ್ಥಳೀಯರಾದ ತೌಫಿಕ್, ಸುಬ್ರಹ್ಮಣ್ಯ, ಗಿರೀಶ್, ಭಾರತಿ ಸಾಮಾಜಿಕ ಸೇವಾ ಶೌಚಗೃಹ ಮತ್ತು ಸ್ನಾನಗೃಹ ಸಂಸ್ಥೆ ಸಿಬ್ಬಂದಿ ಇದ್ದರು.