ಮುಡಾ ವ್ಯಾಪ್ತಿಯ ಬಡಾವಣೆ ನಗರಸಭೆ, ಪಪಂಗೆ ಹಸ್ತಾಂತರ

mysore
Published on

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಖಾಸಗಿ ಬಡಾವಣೆಗಳನ್ನು ಆಯ ವ್ಯಾಪ್ತಿಯ ನಗರಸಭೆ ಹಾಗೂ ಪಟ್ಟಣ ಪಂಚಾಯಿತಿಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಧಿಕಾರದ ಅಧ್ಯಕ್ಷ ಕೆ.ಮರೀಗೌಡ ತಿಳಿಸಿದರು.
ಪ್ರಾಧಿಕಾರದ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡದೊಂದಿಗೆ ಶುಕ್ರವಾರ ಸೋಮನಾಥನಗರ, ಆರ್.ಟಿ.ನಗರ, ಸಿದ್ದರಾಮಯ್ಯ ಬಡಾವಣೆ, ಐಶ್ವರ್ಯನಗರ, ಎಸ್‌ಬಿಎಂ ಲೇಔಟ್, ಚಾಮುಂಡಿಬೆಟ್ಟದ ಬಳಿ ಇರುವ ವಿದ್ಯುತ್ ಚಿತಗಾರ ಪರಿಶೀಲಿಸಿ ಮಾತನಾಡಿದರು.
ಸೋಮನಾಥ ನಗರಕ್ಕೆ ಒಳ ಚರಂಡಿ ವ್ಯವಸ್ಥೆ, ಟ್ಯಾಂಕ್ ನಿರ್ಮಾಣ ಮಾಡಲು ಕ್ರಮ ವಹಿಸಲಾಗುವುದು. ಕೆರ್ಗಳ್ಳಿ ಕೆರೆಯಿಂದ ಬರುವ ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಿಸಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಲಿಂಗಾಂಬುಧಿ ಪಾಳ್ಯದ ಸುತ್ತ-ಮುತ್ತಲ ಬಡಾವಣೆಗಳಿಗೆ ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರು ಒದಗಿಸಲು ಕ್ರಮ ವಹಿಸಲಾಗುತ್ತದೆ ಎಂದರು.
ಆರ್.ಟಿ.ನಗರದಲ್ಲಿ ನಿಜವಾದ ಭೂ ಮಾಲೀಕನಿಗೆ ಹಣವನ್ನು ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಜನಸ್ಪಂದನ ಕಾರ್ಯಕ್ರಮದಲ್ಲಿ ಎಸ್‌ಬಿಎಂ ಲೇಔಟ್‌ನ ರಸ್ತೆ ಹಾಳಾಗಿರುವ ಬಗ್ಗೆ ದೂರುಗಳು ಬಂದಿದ್ದು, ಅಗತ್ಯ ಕ್ರಮ ವಹಿಸಲಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net