ಪೇಜಾವರ ಶ್ರೀಗಳಿಗೆ ಕಿಗ್ಗಾದ ಪ್ರಸಾದ ಹಸ್ತಾಂತರ

16sri-1
ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿಗೆ ಕಿಗ್ಗಾದ ಆರ್ಚಕರು ಋಷ್ಯಶೃಂಗಸ್ವಾಮಿ ಪ್ರಸಾದ, ತೀರ್ಥ ಹಾಗೂ ಮಂಗಳದ್ರವ್ಯ ಸಮರ್ಪಿಸಿದರು. ವಿಘ್ನರಾಜ್, ವಿಶ್ವೇಂದ್ರಭಟ್, ಅರುಣ್‌ಕುಮಾರ್,ಶ್ರೀನಿವಾಸಮೂರ್ತಿ ಇದ್ದರು.
Published on

ಶೃಂಗೇರಿ: ಕಿಗ್ಗಾದ ಆರ್ಚಕರು ಸೋಮವಾರ ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರನ್ನು ಭೇಟಿ ಮಾಡಿ ಶಾಂತ ಸಮೇತ ಶ್ರೀ ಋಷ್ಯಶೃಂಗ ಸ್ವಾಮಿ ದೇವರ ಪ್ರಸಾದ, ಹಾಗೂ ಒಂದು ಜತೆ ಪಂಚೆ, ಸೀರೆ, ಅರಶಿನ, ಕುಂಕುಮ, ಬಳೆಗಳು ಇತ್ಯಾದಿ ಮಂಗಳ ದ್ರವ್ಯಗಳನ್ನು ನೀಡಲಾಯಿತು.
ಶೃಂಗೇರಿ ಜಗದ್ಗರುಗಳ ಕೃಪಾಶೀರ್ವಾದ ಜತೆಗೆ ತಮ್ಮ ಅಪ್ಪಣೆ ಮನ್ನಿಸಿ ಕಿಗ್ಗಾ ಶ್ರೀ ಋಷ್ಯಶೃಂಗ ಸ್ವಾಮಿ ಪ್ರಸಾದವನ್ನು ತಲುಪಿಸಿದ್ದೇವೆ. ಭರತ ಖಂಡದಲ್ಲಿ ರಾಮರಾಜ್ಯ ನಿರ್ಮಾಣಗೊಂಡು ಸರ್ವರಿಗೂ ಶ್ರೀರಾಮ ಒಳಿತು ಮಾಡಲಿ ಎಂದು ಶ್ರೀ ಋಷ್ಯ ಶೃಂಗ ಸ್ವಾಮಿ ಸನ್ನಿಧಿಯಲ್ಲಿ ಎಂಬ ಪ್ರಾರ್ಥನೆ ಸಲ್ಲಿಸಲಾಗಿದೆ.ನಾವು ತಂದ ಪ್ರಸಾದ ಹಾಗೂ ಮಂಗಳ ದ್ರವ್ಯಗಳನ್ನು ಋಷ್ಯ ಶೃಂಗಸ್ವಾಮಿಗಳು ಉಡುಗೊರೆಯಾಗಿ ನೀಡಿದ್ದಾರೆ ಎಂಬ ಭಾವನೆ ಜತೆಗೆ ಶ್ರದ್ಧಾ ಭಕ್ತಿಯಿಂದ ನಿಮಗೆ ತಲುಪಿಸಲಾಗಿದೆ. ಜ. 22ರಂದು ಆಯೋಧ್ಯೆಯಲ್ಲಿ ನಡೆಯುವ ಪ್ರತಿಷ್ಠಾಪನಾ ಸಂದರ್ಭದಲ್ಲಿ ಶ್ರೀರಾಮನ ಮಂದಿರದ ಸನ್ನಿಧಾನಕ್ಕೆ ಕಿಗ್ಗಾ ದೇವಾಲಯದಿಂದ ನೀಡಿದ ಪ್ರಸಾದವನ್ನು ಸಮರ್ಪಿಸಬೇಕು ಎಂದು ಕಿಗ್ಗಾ ದೇವಾಲಯದ ತಂತ್ರಿಗಳಾದ ಶ್ರೀ ವಿಶ್ವನಾಥ್ ಭಟ್ ಪೇಜಾವರ ಶ್ರೀಗಳಿಗೆ ಮನವಿ ಮಾಡಿಕೊಂಡರು.
ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥರು ಮಾತನಾಡಿ,ಮಳೆ ದೇವರು ಎಂದು ಖ್ಯಾತಿ ಪಡೆದ ಶ್ರೀ ಋಷ್ಯಶೃಂಗ ಸ್ವಾಮಿ ಅವರ ಶಕ್ತಿ ಅಸಾಮಾನ್ಯ. ದಶರಥ ಮಹಾರಾಜನು ಅಮಾತ್ಯ ಸುಮಂತ್ರನ ಸೂಚನೆಯಂತೆ ಸಂತಾನ ಪ್ರಾಪ್ತಿಗಾಗಿ ವಿಭಾಂಡಕ ಮಹರ್ಷಿಗಳ ಪುತ್ರ ಶ್ರೀಋಷ್ಯಶೃಂಗೇಶ್ವರ ಸ್ವಾಮಿ ಅವರನ್ನು ಕರೆಸಿ ಪುತ್ರ ಕಾಮೇಷ್ಠಿಯಾಗ ನೆರವೇರಿಸಿದ್ದಾರೆ. ಅದ್ದರಿಂದ ಶ್ರೀರಾಮನ ಅವತಾರವಾಗಲು ಸಾಧ್ಯವಾಯಿತು. ಪವಿತ್ರ ಭೂಮಿಯಾದ ಕಿಗ್ಗಾ ದೇವಾಲಯದ ಪ್ರಸಾದವನ್ನು ಶ್ರೀರಾಮನ ಪ್ರತಿಷ್ಠಾಪನೆ ವಿಧಿಗಳು ಸಾಂಗವಾಗಿ ನೆರವೇರಬೇಕು ಎಂಬ ಪ್ರಾರ್ಥನೆ ಜತೆಗೆ ನೀಡಿರುವ ಪವಿತ್ರ ಪ್ರಸಾದ ಹಾಗೂ ಮಂಗಳದ್ರವ್ಯವನ್ನು ಆಯೋಧ್ಯೆ ಶ್ರೀ ರಾಮ ಮಂದಿರಕ್ಕೆ ತಲುಪಿಸುವುದಾಗಿ ತಿಳಿಸಿದರು.
ಶ್ರೀ ವಿಶ್ವನಾಥ್ ಭಟ್, ಅರುಣ್‌ಕುಮಾರ್, ಶ್ರೀನಿವಾಸ ಮೂರ್ತಿ , ವಿಶ್ವೇಂದ್ರ ಭಟ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net