ಕಾವೇರಿ ಕಾಲೇಜಿಗೆ ಗೇಣಿ, ಪಹಣಿ ಪತ್ರ ಹಸ್ತಾಂತರ

ಕಾವೇರಿ ಕಾಲೇಜಿಗೆ ಗೇಣಿ, ಪಹಣಿ ಪತ್ರ ಹಸ್ತಾಂತರ
Published on

ವಿರಾಜಪೇಟೆ: ಕಾವೇರಿ ವಿದ್ಯಾಸಂಸ್ಥೆಯ ಗೇಣಿ ಮತ್ತು ಪಹಣಿ ಪತ್ರವನ್ನು ಶಾಸಕ ಎ.ಎಸ್.ಪೊನ್ನಣ್ಣ ಕಾಲೇಜಿನ ಪ್ರಾಂಶುಪಾಲರಿಗೆ ಮಂಗಳವಾರ ಹಸ್ತಾಂತರಿಸಿದರು.

1980ರಲ್ಲಿ ಆರಂಭವಾದ ಕಾವೇರಿ ಕಾಲೇಜಿನ ವಿರಾಜಪೇಟೆಯ ಜಾಗದ ಮೂಲ ಗೇಣಿ ಹಾಗೂ ಪಹಣಿ ಪತ್ರಿಕೆಯು ಸ್ಥಳದ ಮೂಲ ಮಾಲೀಕ ಕೀತಿಯಂಡ ಅಪ್ಪಾಜಿ ಅವರ ಹೆಸರಿನಲ್ಲಿಯೇ ಇತ್ತು. 4 ದಶಕಗಳಿಂದ ವಿದ್ಯಾಸಂಸ್ಥೆಯವರು ಎಷ್ಟು ಪ್ರಯತ್ನ ಪಟ್ಟರು ಸ್ಥಳದ ಮಾಲೀಕತ್ವವನ್ನು ವಿದ್ಯಾ ಸಂಸ್ಥೆಯ ಹೆಸರಿಗೆ ಬದಲಾಯಿಸಲು ಸಾಧ್ಯವಾಗಿರಲಿಲ್ಲ. ಈ ವಿಚಾರದ ಬಗ್ಗೆ ತಿಳಿದ ವಿರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯೆ ದೇಚಮ್ಮ ಕಾಳಪ್ಪ ಶಾಸಕ ಎ.ಎಸ್.ಪೊನ್ನಣ್ಣ ಅವರ ಗಮನಕ್ಕೆ ತಂದರು. ಶಾಸಕರು ಈ ಬಗ್ಗೆ ಮುತುವರ್ಜಿ ವಹಿಸಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಕೀತಿಯಂಡ ಅಪ್ಪಾಜಿಯವರ ಹೆಸರಿನಲ್ಲಿದ್ದ ಗೇಣಿ ಹಾಗೂ ಪಹಣಿ ಪತ್ರಿಕೆಯನ್ನು ಕಾವೇರಿ ವಿದ್ಯಾಸಂಸ್ಥೆ ಗೋಣಿಕೊಪ್ಪದ ಹೆಸರಿಗೆ ಬದಲಾಯಿಸಿ ಮಂಗಳವಾರ ತಮ್ಮ ಕಚೇರಿಯಲ್ಲಿ ಗೇಣಿ ಹಾಗೂ ಪಹಣಿ ಪತ್ರವನ್ನು ಕಾವೇರಿ ವಿದ್ಯಾಸಂಸ್ಥೆಗೆ ಹಸ್ತಾಂತರಿಸಿದರು.

ಆಡಳಿತ ಮಂಡಳಿಯ ಪರವಾಗಿ ಕಾಲೇಜಿನ ಪ್ರಾಂಶುಪಾಲ ಬೆನಡಿಕ್ಟ್ ಆರ್ ಸಲ್ಡಾನ್ಹ ಹಾಗೂ ಉಪನ್ಯಾಸಕರು ಪತ್ರವನ್ನು ಸ್ವೀಕರಿಸಿದರು. ನಂತರ ಮಾತನಾಡಿದ ಬೆನಡಿಕ್ಟ್ ಆರ್ ಸಲ್ಡಾನ್ಹ 1980ರಲ್ಲಿ ಶುಂಠಿಕೊಪ್ಪದ ನಾಕೂರು ಎಸ್ಟೇಟ್‌ನ ಪಾಂಡಂಡ ನಂಜಪ್ಪ ತಮ್ಮ ಪತ್ನಿ ಸುಬ್ಬಮ್ಮ ನಂಜಪ್ಪ ಅವರ ಜ್ಞಾಪಕಾರ್ಥವಾಗಿ ವಿದ್ಯಾಸಂಸ್ಥೆಗೆ ಮೂರು ಲಕ್ಷ ರೂ. ನೀಡಿದ್ದರು. ಈ ಹಣದಿಂದ ಕೀತಿಯಂಡ ಅಪ್ಪಾಜಿ ಅವರ ಸ್ವಾಧೀನದಲ್ಲಿದ್ದ ಈ ಸ್ಥಳವನ್ನು ಖರೀದಿ ಮಾಡಲಾಗಿತ್ತು. ಖರೀದಿ ಮಾಡಿ ನಲವತ್ತು ವರ್ಷಗಳು ಕಳೆದರು ಸ್ಥಳದ ಗೇಣಿ ಹಾಗೂ ಪಹಣಿ ಪತ್ರಿಕೆಯನ್ನು ಸಂಸ್ಥೆಗೆ ವರ್ಗಾವಣೆ ಮಾಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಸದ್ಯ ವಿರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯೆ ದೇಚಮ್ಮ ಕಾಳಪ್ಪ ಅವರ ಕಾಳಜಿ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಅವರ ಮುತುವರ್ಜಿ ಹಾಗೂ ಶಾಸಕರ ನೆರವಿನಿಂದ ಗೇಣಿ ಹಾಗೂ ಪಹಣಿ ಪತ್ರಿಕೆ ಕಾವೇರಿ ವಿದ್ಯಾಸಂಸ್ಥೆಯ ಹೆಸರಿಗೆ ಬದಲಾಗಿದೆ ಎಂದು ತಿಳಿಸಿದರು.

ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಣಯ್ಯ, ಐಕ್ಯೂಎಸಿ ಸಂಚಾಲಕಿ ಡಾ.ಕೆ.ಜಿ.ವೀಣಾ, ಅಧೀಕ್ಷಕ ಬಿ.ಎಸ್.ಜಗದೀಶ್, ಸೋಮನಾಥ್, ಉಪನ್ಯಾಸಕರ ಎಲ್.ಆರ್.ರಾಘವೇಂದ್ರ, .ಟಿ.ಅಕ್ಷಿತಾ ನಾಯ್ಕ, ಬಿ.ಬಿ.ಸುನಿಲ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net