

ಕುಂದಾಪುರ: ಕೊನೆಗೂ ಕುಂದಾಪುರದ ನೆಹರೂ ಮೈದಾನವನ್ನು ಶನಿವಾರ ಕಂದಾಯ ಇಲಾಖೆಯಿಂದ ಪುರಸಭೆಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಿತು.
ಮೈದಾನಕ್ಕೆ ಸಂಬಂಧಿಸಿದ ದಾಖಲೆ ಪತ್ರವನ್ನು ನೆಹರೂ ಮೈದಾನದಲ್ಲಿಯೇ ಕುಂದಾಪುರ ಹೋಬಳಿಯ ಕಂದಾಯ ನಿರೀಕ್ಷಕ ದಿನೇಶ್ ಅವರು ಪುರಸಭೆ ಅಧ್ಯಕ್ಷ ಮೋಹನದಾಸ್ ಶೆಣೈ, ಮುಖ್ಯಾಧಿಕಾರಿ ಆನಂದ ಜೆ.ಅವರಿಗೆ ಸಾಂಕೇತಿಕವಾಗಿ ಹಸ್ತಾಂತರಿಸಿದರು.
ಅಧ್ಯಕ್ಷ ಮೋಹನದಾಸ್ ಶೆಣೈ ಅವರು, ಮೈದಾನಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆ ನಮಗೆ ಸಲ್ಲಿಕೆಯಾದ ಬಳಿಕ ಇದನ್ನು ಯಾವ ರೀತಿಯಲ್ಲಿ ಇಲ್ಲಿನ ಜನರಿಗೆ ಪ್ರಯೋಜನವಾಗುವಂತೆ ನಿರ್ವಹಿಸಬಹುದು ಎನ್ನುವ ಕುರಿತು ಚಿಂತನೆ ನಡೆಸಲಾಗುವುದು. ಅದಕ್ಕೂ ಮೊದಲು ಎಷ್ಟು ಜಾಗ ಇದೆ, ಎಷ್ಟು ಜಾಗ ಒತ್ತುವರಿ ಆಗಿದೆ ಎನ್ನುವುದನ್ನು ಸರ್ವೇ ನಡೆಸಲಾಗುವುದು. ಶಾಲೆ, ಹಾಸ್ಟೆಲ್ನ ಬಳಕೆಗೆ ಬಿಡಬೇಕಾದ ರಸ್ತೆಯ ಬಗ್ಗೆ ಗಮನ ಹರಿಸಲಾಗುವುದು ಎಂದರು.
ಪುರಸಭೆ ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯೀ ಸಮಿತಿ ಅಧ್ಯಕ್ಷ ಪ್ರಭಾಕರ ವಿ., ಸದಸ್ಯರಾದ ದೇವಕಿ ಸಣ್ಣಯ್ಯ, ಸಂತೋಷ್ ಶೆಟ್ಟಿ, ರಾಘವೇಂದ್ರ ಖಾರ್ವಿ, ಪುರಸಭೆ ಮ್ಯಾನೇಜರ್ ಸೂರ್ಯಕಾಂತ್, ಪರಿಸರ ಅಭಿಯಂತರ ಗುರುಪ್ರಸಾದ್, ಕಂದಾಯ ಅಧಿಕಾರಿ ಅಂಜಲಿ, ಹಿರಿಯ ಆರೋಗ್ಯ ನಿರೀಕ್ಷಕ ರಾಘವೇಂದ್ರ ನಾಯ್ಕ, ಸಿಬ್ಬಂದಿ, ಕಸಬಾ ಗ್ರಾಮ ಆಡಳಿತಾಧಿಕಾರಿ ಧೀರಜ್ ಪೂಜಾರಿ, ಸಹಾಯಕ ನವೀನ್ ಮತ್ತಿತರರು ಉಪಸ್ಥಿತರಿದ್ದರು.