ಸಂತ್ರಸ್ತೆಗೆ ವಾತ್ಸಲ್ಯ ಮನೆ ಹಸ್ತಾಂತರ

22 KRN-11
ಕೆ.ಆರ್.ನಗರ ತಾಲೂಕಿನ ಬ್ಯಾಡರಹಳ್ಳಿ ಗ್ರಾಮದ ನಿವಾಸಿ ವೃದ್ಧೆ ಸುಂದ್ರಮ್ಮ ಅವರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಸ್ಥೆ ವತಿಯಿಂದ ನಿರ್ಮಿಸಿಕೊಡಲಾದ ಮನೆಯನ್ನು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಹಸ್ತಾಂತರಿಸಿದರು. ಮಹೇಶ್, ಜಯರಾಮ ನೆಲ್ಲಿತ್ತಾಯ, ಮೂಕಾಂಬಿಕಾ, ಪಾತಲಿಂಗಪ್ಪ, ಸಣ್ಣಯ್ಯ, ರಾಜಶೇಖರಯ್ಯ, ಹರ್ಷಿತಾ, ಅನುಷಾ ಇತರರು ಇದ್ದರು.
Published on

 ಕೆ.ಆರ್.ನಗರ: ಪ್ರಕೃತಿ ವೈಪರೀತ್ಯದಿಂದ ಕೆಲವು ತಿಂಗಳ ಹಿಂದೆ ಹಾನಿಗೊಳಗಾಗಿದ್ದ ಮನೆಯ ಸಂತ್ರಸ್ತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಸ್ಥೆಯು ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಮನೆ ನಿರ್ಮಿಸಿ ಹಸ್ತಾಂತರಿಸಿದರು.

ತಾಲೂಕಿನ ಹೆಬ್ಬಾಳು ವಲಯದ ಬ್ಯಾಡರಹಳ್ಳಿಯಲ್ಲಿ ವೃದ್ಧೆ ಸುಂದ್ರಮ್ಮ ಅವರ ಮನೆ ಸಿಡಿಲು ಬಡಿದು ಹಾನಿಗೊಂಡಿತ್ತು. ಇದನ್ನು ಕಂಡ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಸ್ಥೆಯವರು ವೃದ್ಧೆಗೆ ಮೊದಲಿಗೆ ತಿಂಗಳಿಗೆ 1000 ಮಾಸಾಶನ ಕೊಟ್ಟು ಅವರಿಗೆ ವಾತ್ಸಲ್ಯ ಮನೆ ನಿರ್ಮಾಣ ಮಾಡಿ ಈ ಮನೆಯನ್ನು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡರ ಮೂಲಕ ಶನಿವಾರ ಹಸ್ತಾಂತರಿಸಲಾಯಿತು.

ದೊಡ್ಡಸ್ವಾಮೇಗೌಡರು ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಶ್ರೀ ಕ್ಷೇತ್ರದ ಹೆಸರಿನಲ್ಲಿ ಪ್ರಾರಂಭಿಸಿರುವ ಸಂಸ್ಥೆಯು ಸಮಾಜದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಯಶಸ್ವಿಯಾಗಿ ಸಾಗುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ಹೇಳಿದರು.

ಗ್ರಾಮೀಣ ಭಾಗದ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಂಘಗಳನ್ನು ರಚಿಸಿ ಸಾಲ ಸೌಲಭ್ಯ, ಶಿಕ್ಷಣ ಕ್ಷೇತ್ರಕ್ಕೆ ಅನೇಕ ಸೌಲಭ್ಯಗಳು, ಕೆರೆಗಳ ಅಭಿವೃದ್ಧಿ, ದೇವಸ್ಥಾನಗಳ ಅಭಿವೃದ್ಧಿ ಸೇರಿದಂತೆ ಬಡವರು, ನಿರ್ಗತಿಕರಿಗೆ ಬದುಕು ನಡೆಸಲು ಸಹಾಯಹಸ್ತ ಚಾಚುವ ಮೂಲಕ ಅಪಾರ ಕೊಡುಗೆ ನೀಡುತ್ತಾ ಸಾಮಾಜಿಕ ಸೇವೆ ಸಲ್ಲಿಸುತ್ತಿರುವುದು ಉತ್ತಮ ಕೆಲಸವಾಗಿದೆ ಎಂದು ಅಭಿಪ್ರಾಯ ಪಟ್ಟರು. \

ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಪ್ರಾದೇಶಿಕ ಜ್ಞಾನ ವಿಕಾಸ ಯೋಜನಾಧಿಕಾರಿ ಮೂಕಾಂಬಿಕಾ, ತಾಲೂಕು ಯೋಜನಾಧಿಕಾರಿ ಪಾತಲಿಂಗಪ್ಪ, ಕಾಂಗ್ರೆಸ್ ಮುಖಂಡ ಸಣ್ಣಯ್ಯ, ನಿವೃತ್ತ ಶಿಕ್ಷಕ ರಾಜಶೇಖರಯ್ಯ, ಸಂಸ್ಥೆಯ ವಲಯದ ಮೇಲ್ವಿಚಾರಕಿ ಹರ್ಷಿತಾ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಅನುಷ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net