ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ

ಮಲೆಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಆಯೋಜಿಸಲಾಗಿತ್ತು. ಗುರುಪ್ರಸಾದ್, ಗುರುಲಿಂಗಯ್ಯ, ಚಿನ್ನಣ್ಣ, ಮಹಾದೇವ, ಚಂದ್ರಶೇಖರ್, ರಾಜೇಶ್, ನಂಜಮಣಿ ಇತರರು ಇದ್ದರು.
ಮಲೆಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಆಯೋಜಿಸಲಾಗಿತ್ತು. ಗುರುಪ್ರಸಾದ್, ಗುರುಲಿಂಗಯ್ಯ, ಚಿನ್ನಣ್ಣ, ಮಹಾದೇವ, ಚಂದ್ರಶೇಖರ್, ರಾಜೇಶ್, ನಂಜಮಣಿ ಇತರರು ಇದ್ದರು.
Published on

ಹನೂರು: ಸಮಿತಿ ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಫೆ.15 ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟ ಸಭೆಯ ಯಶಸ್ಸಿಗೆ ಪ್ರತಿಯೊಬ್ಬರೂ ಅಗತ್ಯ ಮುತುವರ್ಜಿ ವಹಿಸಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.

ಸಚಿವ ಸಂಪುಟ ಸಭೆ ಸಂಬಂಧ ತಾಲೂಕಿನ ಮಲೆಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ಪಡೆದು ಮಾತನಾಡಿದರು.

ಬೆಟ್ಟದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಆಯೋಜಿಸಿರುವುದು ಜಿಲ್ಲೆಯ ಅಭಿವೃದ್ಧಿಗೆ ವರದಾನವಾಗಲಿದೆ. ಈ ಸಭೆಗೆ ಗಣ್ಯರು ಆಗಮಿಸುವುದರಿಂದ ಸಭೆ ಸುಸೂತ್ರವಾಗಿ ನಡೆಯಬೇಕಿದೆ. ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಸ್ವಾಗತ, ಹಣಕಾಸು, ವಸತಿ, ಆಹಾರ ಮತ್ತು ಕುಡಿಯುವ ನೀರು, ಸಾರಿಗೆ, ಭದ್ರತಾ ಸೇರಿದಂತೆ ಅನೇಕ ಸಮಿತಿಗಳನ್ನು ರಚಿಸಲಾಗಿದ್ದು, ಅಧಿಕಾರಿಗಳನ್ನೂ ನಿಯೋಜಿಸಲಾಗಿದೆ. ಯಾವುದೇ ಕೊರತೆಯಾಗದಂತೆ ಹಾಗೂ ನೀಡಿರುವ ಜವಬ್ದಾರಿಯಲ್ಲಿ ಲೋಪವಾಗದಂತೆ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಸಚಿವರು ಹಾಗೂ ಅಧಿಕಾರಿಗಳ ವಾಸ್ತವ್ಯಕ್ಕೆ ಮೂಲ ಸೌಕರ್ಯ ಕೊರತೆಯಾಗದಂತೆ ವಸತಿ ವ್ಯವಸ್ಥೆಯಾಗಬೇಕು. ವಸತಿ ಗೃಹಗಳನ್ನು ಶೀಘ್ರ ರಿಪೇರಿಗೊಳಿಸಬೇಕು. ಸ್ಥಳೀಯವಾಗಿ ದೊರೆಯುವ ವಸತಿ ಗೃಹವನ್ನು ವಾಸ್ತವ್ಯಕ್ಕೆ ಬಳಸಿಕೊಳ್ಳಬೇಕು. ಜತೆಗೆ ಕನಕ ಸಮುದಾಯ ಭವನ, ಡಾರ್ಮಿಟರಿ, ಬಿಜಿಎಸ್ ವಸತಿ ಗೃಹವನ್ನೂ ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪಾರ್ಕಿಂಗ್ ವ್ಯವಸ್ಥೆ ಸಮರ್ಪಕವಾಗಿರಲಿ; ಸಂಪುಟ ಸಭೆಗೆ ಸಚಿವರು ಹಾಗೂ ಆಯಾ ಇಲಾಖೆ ಅಧಿಕಾರಿಗಳು ಭಾಗಿಯಾಗುವುದರಿಂದ ಹೆಚ್ಚು ವಾಹನಗಳು ಆಗಮಿಸುತ್ತವೆ. ಆದ್ದರಿಂದ ಪಾರ್ಕಿಂಗ್ ವ್ಯವಸ್ಥೆ ಸಮರ್ಪಕವಾಗಿರಬೇಕು. ಯಾವುದೇ ರೀತಿಯಲ್ಲೂ ಸಮಸ್ಯೆಯಾಗಬಾರದು. ಈ ಸಂಬಂಧ ಪಿಡಬಡ್ಲೂೃಡಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಮುತುರ್ವಜಿ ವಹಿಸಿ ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕು ಎಂದು ಸೂಚಿಸಿದರು.

ಎಲ್ಲರ ಸಹಕಾರ ಅಗತ್ಯ: ತಾಲೂಕಿನಲ್ಲಿ ಹೆಚ್ಚು ಬಡವರ್ಗಕ್ಕೆ ಸೇರಿದ ಜನರಿದ್ದು, ಇದರಲ್ಲಿ ಕೆಲ ಕುಟುಂಬಗಳಿಗೆ ಮನೆಯೇ ಇಲ್ಲ. ಹಾಗಾಗಿ ಮೂಲ ಸೌಕರ್ಯವನ್ನು ಒದಗಿಸುವುದು ನನ್ನ ಆದ್ಯ ಕರ್ತವ್ಯ. ಈ ದಿಸೆಯಲ್ಲಿ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಲಾಗಿದೆ. ಜತೆಗೆ ಲಕ್ಷಾಂತರ ಭಕ್ತರು ಭೇಟಿ ನೀಡುವ ಮ.ಬೆಟ್ಟ ಇನ್ನಷ್ಟು ಅಭಿವೃದ್ಧಿಯಾಗಬೇಕಿದೆ. ಜತೆಗೆ ಹನೂರಿನಿಂದ ಮ.ಬೆಟ್ಟದ ರಸ್ತೆ ಅಭಿವೃದ್ಧಿಯಾಗಬೇಕಿದ್ದು, ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಲಾಗಿದೆ. ಆದ್ದರಿಂದ ಅಭಿವೃದ್ಧಿಗೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.

ಇದೇ ವೇಳೆ ತಹಸೀಲ್ದಾರ್ ವೈ.ಕೆ. ಗುರುಪ್ರಸಾದ್ ಅವರು ಸಮಿತಿಗಳ ಕಾರ್ಯವೈಖರಿಯ ರೂಪರೇಷದ ಬಗ್ಗೆ ಮಾಹಿತಿ ತಿಳಿಸಿದರು.

ಸಭೆಯಲ್ಲಿ ಬಿಇಒ ಗುರುಲಿಂಗಯ್ಯ, ದೈಹಿಕ ಶಿಕ್ಷಣ ಪರಿವೀಕ್ಷಕ ಮಹಾದೇವ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜೇಶ್, ಮಹಿಳಾ ಮತ್ತು ಮಕ್ಕಳ ಯೋಜನಾಧಿಕಾರಿ ನಂಜಮಣಿ, ಸಮಾಜ ಕಲ್ಯಾಣಾಧಿಕಾರಿ ಕೇಶವಮೂರ್ತಿ, ಸೆಸ್ಕ್ ಎಇಇ ಶಂಕರ್, ಪಿಡಬ್ಲ್ಯುಡಿ ಎಇಇಗಳಾದ ಚಿನ್ನಣ್ಣ, ಪುರುಷೋತ್ತಮ್, ಅಗ್ನಿಶಾಮಕ ಠಾಣಾಧಿಕಾರಿ ಪ್ರಶಾಂತ್‌ನಾಯಕ್, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಆರ್‌ಎಫ್‌ಒಗಳಾದ ಲೋಕೇಶ್ ಚೌವ್ಹಾಣ್, ನಿಂರಜನ್, ಇನ್‌ಸ್ಪೆಕ್ಟರ್ ಜಗದೀಶ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net