

ಸಕಲೇಶಪುರ: ಸರ್ಕಾರಿ ಇಲಾಖೆಗಳ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ತಾಲೂಕಿನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿ ಎಂದು ತಹಸೀಲ್ದಾರ್ ಕೆ.ಎಂ.ಸುಪ್ರೀತಾ ಸಲಹೆ ನೀಡಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಬುಧವಾರ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜನಸ್ಪಂದನ ಸಭೆ ಯಶಸ್ಸಿಗೆ ಎಲ್ಲ ಅಧಿಕಾರಿಗಳು ಸಮರ್ಥವಾಗಿ ಕೆಲಸ ಮಾಡುವ ಮೂಲಕ ಕೊಡುಗೆಗಳನ್ನು ನೀಡಬೇಕು. ಅಲ್ಲದೆ ತಮ್ಮ ಇಲಾಖೆ ವ್ಯಾಪ್ತಿಯ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವ ಮೂಲಕ ಫಲಾನುಭವಿಗಳಿಗೆ ಸೂಕ್ತ ಸಮಯದಲ್ಲಿ ಸೌಲಭ್ಯಗಳನ್ನು ದೊರಕಿಸುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.
ವಿನಾಕಾರಣ ಕಾಲಹರಣ ಮಾಡುವ ಮೂಲಕ ರೈತರನ್ನು ಅಲೆಸುವುದು ಅಕ್ಷಮ್ಯ. ಇಲಾಖೆಗಳ ನಡುವೆ ಸೌಹಾದರ್ ಸಂಬಂಧಗಳಿದ್ದಾಗ ಮಾತ್ರ ಸರ್ಕಾರಿ ಕೆಲಸಗಳು ವೇಗವಾಗಿ ನಡಯಲಿವೆ. ಆದ್ದರಿಂದ, ಪರಸ್ಪರ ಇಲಾಖೆ ಮುಖ್ಯಾಧಿಕಾರಿ ನಿರಂತರ ಸಂಪರ್ಕದಲ್ಲಿರಬೇಕು. ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತಗಳ ಬಗ್ಗೆ ಎಲ್ಲ ಇಲಾಖೆ ಅಧಿಕಾರಿಗಳು ಎಚ್ಚರದಿಂದ ಇರುವ ಮೂಲಕ ತಮ್ಮ ಪಾಲಿನ ಕರ್ತವ್ಯವನ್ನು ಸೂಕ್ತ ಸಮಯದಲ್ಲಿ ಮುಗಿಸಬೇಕು ಎಂದರು.
ಶಿರಸ್ತೇದಾರ್ ರವಿಕುಮಾರ್, ಪಟ್ಟಣ ಠಾಣೆ ವೃತ್ತ ನಿರೀಕ್ಷಕ ಕೃಷ್ಣಪ್ಪ ಇತರರು ಇದ್ದರು.