ಎಸ್‌ಎಂಕೆ ದತ್ತಿ ನಿಧಿಗೆ ಚೆಕ್ ಹಸ್ತಾಂತರ: ಶಾಸಕ ಕೆ.ಎಂ.ಉದಯ್, ಎಂಎಲ್‌ಸಿ ದಿನೇಶ್ ಗೂಳಿಗೌಡ ಭಾಗಿ

Handing over of cheque to SMK Endowment Fund Mandya
Published on

ಮಂಡ್ಯ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ದಿವ್ಯಚೇತನ ಎಸ್.ಎಂ.ಕೃಷ್ಣ ದತ್ತಿ ನಿಧಿಗೆ ಮದ್ದೂರು ಶಾಸಕ ಕೆ.ಎಂ.ಉದಯ್ ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮೈಸೂರಿನಲ್ಲಿ ಚೆಕ್ ಹಸ್ತಾಂತರಿಸಿದರು.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ಸ್ಥಾನ ಪಡೆದ ಇಬ್ಬರು ವಿದ್ಯಾರ್ಥಿಗೆ ಚಿನ್ನದ ಪದಕ ನೀಡಲು ಹತ್ತು ಲಕ್ಷ ರೂ ದತ್ತಿ ನಿಧಿ ಡಿಡಿಯನ್ನು ಶಾಸಕ ಕೆ.ಎಂ.ಉದಯ್ ವಿವಿಗೆ ಹಾಗೂ ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಚಿನ್ನದ ಪದಕ ನೀಡಲು 5 ಲಕ್ಷ ರೂ ದತ್ತಿ ನಿಧಿ ಡಿಡಿಯನ್ನು ದಿನೇಶ್‌ಗೂಳಿಗೌಡ ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರಿಸಿದರು. ಮೈಸೂರು ರಾಮಕೃಷ್ಣ ಆಶ್ರಮದ ಮುಕ್ತಿದಾನಂದ ಮಹಾರಾಜರು ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಲೋಕನಾಥ್ ಡಿಡಿ ಸ್ವೀಕರಿಸಿದರು.

ಈ ವೇಳೆ ಶಾಸಕ ಕೆ.ಎಂ.ಉದಯ್ ಮಾತನಾಡಿ, ಎಸ್.ಎಂ.ಕೃಷ್ಣ ಅವರು ಮಂಡ್ಯ ಜಿಲ್ಲೆಗೆ ಮಾತ್ರವಲ್ಲ ಈ ನಾಡಿಗೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಅವರ ಜೀವನ ಶೈಲಿ, ಕಾರ್ಯವೈಖರಿ ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು. ಈ ನಿಟ್ಟಿನಲ್ಲಿ ಅವರ ಹೆಸರನ್ನು ಶಾಶ್ವತವಾಗಿ ಉಳಿಯಬೇಕು ಎಂಬ ಕಾರಣದಿಂದ ದತ್ತಿ ನಿಧಿ ಸ್ಥಾಪಿಸಲಾಗಿದೆ ಎಂದು ಹೇಳಿದರು.

ಎಂಎಲ್‌ಸಿ ದಿನೇಶ್ ಗೂಳಿಗೌಡ ಮಾತನಾಡಿ, ತುಂಬು ಜೀವನ ನಡೆಸಿದ ಎಸ್.ಎಂ.ಕೃಷ್ಣ ಅವರು ಬದುಕಿನುದ್ದಕ್ಕೂ ಶಿಸ್ತು ಮೈಗೂಡಿಸಿಕೊಂಡಿದ್ದರು. ರಾಮಕೃಷ್ಣ ಆಶ್ರಮದ ಶಿಸ್ತು ಅವರನ್ನು ಮೇರು ವ್ಯಕ್ತಿಯನ್ನಾಗಿ ರೂಪಿಸುವಂತೆ ಮಾಡಿತು. ಅವರ ಸಾಧನೆ, ಕಾರ್ಯಕ್ಷಮತೆ ವಿದ್ಯಾರ್ಥಿಗಳಿಗೆ ಅನುಕರಣೀಯ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರು ಸ್ಪೂರ್ತಿದಾಯಕವಾಗಲಿ ಅವರ ಹೆಸರು ಚಿರಸ್ಮರಣೀಯವಾಗಿ ಉಳಿಯಲೆಂದು ಎಸ್.ಎಂ.ಕೃಷ್ಣ ಅವರ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪಿಸಿ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ಕೆ ಮುನ್ನುಡಿ ಬರೆಯಲಾಗಿದೆ ಎಂದರು.

ಆಶ್ರಮದ ಯುಕ್ತಿದಾನಂದ ಸ್ವಾಮೀಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಾದೇಗೌಡ, ಎಚ್.ಎ.ವೆಂಕಟೇಶ್, ವಿಕ್ರಾಂತ್ ದೇವೇಗೌಡ, ಓಂಕಾರ್, ಸತ್ಯಾನಂದ ಇತರರಿದ್ದರು.

ಮಂಡ್ಯ ಜಿಲ್ಲೆಯಲ್ಲಿ ಹುಟ್ಟಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತಮ್ಮದೇ ಛಾಪು ಮೂಡಿಸಿ ಹಲವು ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸಿ ನಾಡಿನ ಅಭಿವೃದ್ಧಿಗೆ ಶ್ರಮಿಸಿದ್ದ ಎಸ್.ಎಂ.ಕೃಷ್ಣ ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಭಿಮಾನಿಗಳು ಎಸ್.ಎಂ.ಕೃಷ್ಣ ಅವರ ಹೆಸರಿನಲ್ಲಿ ಎಂಟು ದತ್ತಿ ನಿಧಿ ಸ್ಥಾಪಿಸಲಾಗಿದೆ.

ದತ್ತಿ ನಿಧಿಯಿಂದ ಬರುವ ಹಣದಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು, ರೈತರು, ಗಣ್ಯರಿಗೆ ಪ್ರತಿವರ್ಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಮೂಲಕ ಉನ್ನತ ಸಾಧನೆಯ ಕನಸು ಹೊತ್ತವರಿಗೆ ಎಸ್.ಎಂ.ಕೃಷ್ಣ ಅವರು ಮಾದರಿಯಾಗಲಿ ಹಾಗೂ ಮತ್ತಷ್ಟು ಸಾಧಕರು ಹೊರಹೊಮ್ನಿ ನಾಡು ನುಡಿಗೆ ಶ್ರಮಿಸುವಂತಾಗಲಿ ಎಂಬ ಉದ್ದೇಶದಿಂದ ಈ ದತ್ತಿ ಪ್ರಶಸ್ತಿ ನೀಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net