

ಕುಮಟಾ: ತಾಲೂಕಿನ ಸಂತೆಗುಳಿ, ಸೊಪ್ಪಿನಹೊಸಳ್ಳಿ, ವಾಲಗಳ್ಳಿ ಹಾಗೂ ಕೂಜಳ್ಳಿ ಪಂಚಾಯಿತಿ ವ್ಯಾಪ್ತಿಯ ವಸತಿ ಯೋಜನೆ ಫಲಾನುಭವಿಗಳಿಗೆ ಶಾಸಕ ದಿನಕರ ಶೆಟ್ಟಿ ಇತ್ತೀಚೆಗೆ ಕಾರ್ಯಾದೇಶ ಪತ್ರ ಹಸ್ತಾಂತರಿಸಿದರು.
ಸಂತೆಗುಳಿಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂತೆಗುಳಿ ಹಾಗೂ ಸೊಪ್ಪಿನಹೊಸಳ್ಳಿ ಪಂಚಾಯಿತಿ ವ್ಯಾಪ್ತಿಯ 44 ಫಲಾನುಭವಿಗಳಿಗೆ ಕಾರ್ಯಾದೇಶ ನೀಡಲಾಯಿತು. ಬಳಿಕ ವಾಲಗಳ್ಳಿಯ ವಿಎಸ್‌ಎಸ್ ಬ್ಯಾಂಕ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಲಗಳ್ಳಿ ಹಾಗೂ ಕೂಜಳ್ಳಿ ಪಂಚಾಯಿತಿ ವ್ಯಾಪ್ತಿಯ 51 ಫಲಾನುಭವಿಗಳಿಗೆ ವಸತಿ ಯೋಜನೆಯ ಕಾರ್ಯಾದೇಶ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ಒಟ್ಟು 95 ಫಲಾನುಭವಿಗಳಿಗೆ ವಸತಿ ಯೋಜನೆಯ ಕಾರ್ಯಾದೇಶ ಪತ್ರ ನೀಡಲಾಗಿದೆ. ಸೂಕ್ತ ವಸತಿ ವ್ಯವಸ್ಥೆ ಇಲ್ಲದ ಬಡ ಕುಟುಂಬಗಳಿಗೆ ಅನುಕೂಲವಾಗಬೇಕೆಂದು ಸರ್ಕಾರ ಈ ಯೋಜನೆ ನೀಡಿದ್ದು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. 2021-22 ನೇ ಸಾಲಿನಲ್ಲಿ ಬಸವ ವಸತಿ ಯೋಜನೆಯಡಿ ಮಂಜೂರಾದ ಹೆಚ್ಚುವರಿ ಮನೆಗಳು ಇದಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ವಸತಿ ಯೋಜನೆಯಲ್ಲಿ ಅತಿಹೆಚ್ಚು ಮನೆಗಳು ಮಂಜೂರಾಗಿದ್ದು, ವಸತಿ ರಹಿತರಿಗೆ ಇದರಿಂದ ಅನುಕೂಲವಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಪಡೆದು, ಸರ್ಕಾರದ ನಿಯಮನುಸಾರ ಮನೆಯನ್ನು ನಿರ್ಮಿಸಿಕೊಳ್ಳಿ ಎಂದು ಫಲಾನುಭವಿಗಳಿಗೆ ಸೂಚಿಸಿದರು.
ಈ ವೇಳೆ ಸಂತೆಗುಳಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಕಮಲಾ ಮುಕ್ರಿ, ಸೊಪ್ಪಿನ ಹೊಸಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಅಬ್ದುಲ್ ಖಾದರ್ ಸಾಬ್, ಉಪಾಧ್ಯಕ್ಷೆ ಮಹಾದೇವಿ ಮುಕ್ರಿ, ಸದಸ್ಯರು, ತಾ.ಪಂ. ಇಒ ನಾಗರತ್ನಾ ನಾಯಕ, ವಾಲಗಳ್ಳಿ ಪಂಚಾಯಿತಿ ಅಧ್ಯಕ್ಷ ಪ್ರಕಾಶ ಶಾನಭಾಗ, ಉಪಾಧ್ಯಕ್ಷೆ ಗಂಗೆ ಪಟಗಾರ, ಸದಸ್ಯರು, ಪಿಡಿಒ ಇತರರು ಇದ್ದರು.