

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಭಗವತೀ ಕ್ಷೇತ್ರ ನಿರ್ಮಾಣ ಸಂದರ್ಭದಲ್ಲೂ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೊಡುಗೆ ನೀಡಲಾಗಿದೆ. ಕಳೆದೊಂದು ವರ್ಷದಲ್ಲಿ ತಾಲೂಕು ವ್ಯಾಪ್ತಿಯಲ್ಲಿ ನಾಲ್ಕು ಕ್ಷೇತ್ರಗಳಿಗೆ ಲಕ್ಷಾಂತರ ರೂ. ಧನಸಹಾಯ ನೀಡಲಾಗಿದೆ. ಈ ಮೂಲಕ ‘ಕೆರೆಯ ನೀರನ್ನು ಕೆರೆಗೆ ಚೆಲ್ಲಿ’ ಎನ್ನುವ ನಿಯಮ ಧರ್ಮಾಧಿಕಾರಿಯವರು ಅಳವಡಿಸಿಕೊಂಡಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮಂಗಳೂರು ತಾಲೂಕು ಯೋಜನಾಧಿಕಾರಿ ಮಮತಾ ಎ.ಶೆಟ್ಟಿ ಹೇಳಿದರು. ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಭರಣಿ ಮಹೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡಲಾದ ಧನಸಹಾಯದ ಚೆಕ್ ಅನ್ನು ಶುಕ್ರವಾರ ಹಸ್ತಾಂತರಿಸಿ ಮಾತನಾಡಿದರು. ಯಾವುದೇ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬೇಕಾದರೆ ಹತ್ತು ತಾಯಂದಿರ ಮಕ್ಕಳು ಒಂದೇ ತಾಯಿಯ ಮಕ್ಕಳಂತೆ ಕಾರ್ಯನಿರ್ವಹಿಸಬೇಕಿದೆ. ದೈವ-ದೇವರಿಗೆ ನಿರಂತರ ಸೇವೆ ನಡೆದಾಗ ಕ್ಷೇತ್ರಾಭಿವೃದ್ಧಿ ಸಾಧ್ಯ ಎಂದರು. ಕ್ಷೇತ್ರದ ಅಧ್ಯಕ್ಷ ಚಿದಾನಂದ ಗುರಿಕಾರ ನಂದ್ಯ ಅಧ್ಯಕ್ಷತೆ ವಹಿಸಿದ್ದರು. ಚೀರುಂಭ ಭಗವತೀ ಕ್ಷೇತ್ರದ ಕೋಶಾಧಿಕಾರಿ ಜಗದೀಶ್ ಉಳ್ಳಾಲ್, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷ ಪ್ರಕಾಶ್ ಉಳ್ಳಾಲ್, ಜನಜಾಗೃತಿ ವೇದಿಕೆ ಅಧ್ಯಕ್ಷ ಪರಮೇಶ್ವರ, ವಲಯ ಮೇಲ್ವಿಚಾರಕಿ ಜಯಂತಿ ಮತ್ತಿತರರು ಉಪಸ್ಥಿತರಿದ್ದರು. ಉಪಾಧ್ಯಕ್ಷ ದಿನೇಶ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು.
ಧರ್ಮಸ್ಥಳ ಕ್ಷೇತ್ರದಿಂದ ಅದೆಷ್ಟೋ ದೇವಸ್ಥಾನಗಳು ಅಭಿವೃದ್ಧಿಯಾಗುತ್ತಿದೆ. ಭರಣಿ ಮಹೋತ್ಸವದ ಹೊರೆಕಾಣಿಕೆ ರೂಪದಲ್ಲಿ ಪ್ರಸಾದವಾಗಿ ಎರಡು ಲಕ್ಷ ರೂ. ದೇಣಿಗೆ ಬಂದಿದ್ದು, ಅದು ಎರಡು ಕೋಟಿ ರೂ.ಗೆ ಸಮ. ಚಿದಾನಂದ ಗುರಿಕಾರ ನಂದ್ಯ, ಕ್ಷೇತ್ರದ ಅಧ್ಯಕ್ಷ https://www.vijayavani.net/pressmeet-54 https://www.vijayavani.net/seminar-2