

ಮೈಸೂರು: ಪಶ್ಚಿಮ ಬಂಗಾಳದ ಕರಕುಶಲಕರ್ಮಿಗಳು ರಚಿಸಿದ ಮಣ್ಣಿನ ವಿವಿಧ ವಸ್ತುಗಳು, ಆಲಂಕಾರಿಕ ಪರಿಕರಗಳು, ಬಿದಿರು ಹಾಗೂ ಬೆತ್ತದ ವಸ್ತುಗಳು, ಗರ್ಭಾ ನೃತ್ಯಕ್ಕೆ ಬಳಸುವ ಚನಿಯಾಚೋಲಿ ವಸ್ತ್ರಗಳ ಪ್ರದರ್ಶನ, ರೇಷ್ಮೆ, ಚರ್ಮದ ಉತ್ಪನ್ನಗಳು, ಬೆಡ್‌ಶೀಟ್, ಬೆಡ್ ಕವರ್‌ಗಳು, ಚಳಿಯ ಸಂದರ್ಭದಲ್ಲಿ ನೆರವಾಗುವ ಮೇಲುಹೊದಿಕೆಗಳು, ಚನ್ನಪಟ್ಟಣದ ಗೊಂಬೆಗಳ ಗಡಣ, ಗುಜರಾತ್ ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿರುವ ಪ್ಯಾಚ್‌ವರ್ಕ್‌ನ ಆಲಂಕಾರಿಕ ವಸ್ತ್ರಗಳು…!
ಇವೆಲ್ಲವನ್ನು ಕೊಳ್ಳಲು ಗುಜರಾತ್, ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳಿಗೆ ತೆರಳಬೇಕಿಲ್ಲ. ಮೈಸೂರಿನ ಹೆಬ್ಬಾಳ ರಿಂಗ್‌ರಸ್ತೆಗೆ ಹೊಂದಿಕೊಂಡಂತಿರುವ ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ನಡೆಯುತ್ತಿರುವ ಗಾಂಧಿ ಶಿಲ್ಪ ಬಜಾರ್ ಹಾಗೂ ಗರ್ವಿ ಗುರ್ಜರಿ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಹೋದರೆ ಸಾಕು.
ಕೇಂದ್ರ ಸರ್ಕಾರದ ಜವಳಿ ಸಚಿವಾಲಯದ ವತಿಯಿಂದ ನಡೆಯುತ್ತಿರುವ ಗಾಂಧಿ ಶಿಲ್ಪ ಬಜಾರ್ ಹಾಗೂ ಗುಜರಾತ್ ರಾಜ್ಯ ಕೈಮಗ್ಗ ಮತ್ತು ಕರಕುಶಲ ಅಭಿವೃದ್ಧಿ ನಿಗಮದ ಪ್ರಾಯೋಜಕತ್ವದಲ್ಲಿ ಗರ್ವಿ ಗುರ್ಜರಿ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಹಮ್ಮಿಕೊಳ್ಳಲಾಗಿದೆ. ಪ್ರಶಸ್ತಿ ಪುರಸ್ಕೃತ ಕುಶಲಕರ್ಮಿಗಳು ಸೇರಿ ಸುಮಾರು 75 ಕುಶಲಕರ್ಮಿಗಳು, ಕೈಮಗ್ಗ ನೇಕಾರರು ತಮ್ಮ ಉತ್ಕೃಷ್ಟ ವಸ್ತುಗಳನ್ನು ಈ ಪ್ರದರ್ಶನದಲ್ಲಿ ಅನಾವರಣಗೊಳಿಸಿದ್ದಾರೆ.
ಮರದ ಕೆತ್ತನೆ, ಶಿಲಾಶಿಲ್ಪ, ಕಂಚಿನ ವಿಗ್ರಹಗಳು, ಮರದ ಕುಂದಣ ಕಲೆ, ಮಣ್ಣಿನ ಮಡಕೆಗಳು, ಪೇಪರ್, ರತ್ನಗಂಬಳಿ, ಹತ್ತಿ ಜಮಖಾನ, ಇಮಿಟೇಶನ್ ಆಭರಣಗಳು, ಮರದ ಅರಗಿನ ಕಲಾವಸ್ತುಗಳು, ಕಲಾಂಕಾರಿ ಚಿತ್ರಕಲೆ, ಚರ್ಮದ ಆಕರ್ಷಕ ವಸ್ತುಗಳು, ಚರ್ಮದ ಕಲಾತ್ಮಕ ಚಪ್ಪಲಿಗಳು, ಚನ್ನಪಟ್ಟಣದ ಗೊಂಬೆಗಳು, ಕಸೂತಿ ಕಲೆ, ಮಹೇಶ್ವರಿ, ಚಂದೇರಿ ಸೀರೆಗಳು, ಪಟ್ಟ ಚಿತ್ರ, ಬೆಳ್ಳಿಯ ಸೂಕ್ಷ್ಮ ವಿನ್ಯಾಸದ ವಸ್ತುಗಳು, ಬಿದಿರು-ಬೆತ್ತದ ವಸ್ತುಗಳು, ಚಿಕನ್ ಎಂಬ್ರಾಯ್ಡರಿ, ಡ್ರೈ ಫ್ಲವರ್‌ಗಳು, ಕಲ್ಲಿನ ಕಲಾತ್ಮಕ ವಸ್ತುಗಳು, ಫುಲ್ಕಾರಿ ಬಟ್ಟೆಗಳು ಒಂದೇ ಸೂರಿನಡಿ ಲಭ್ಯವಿವೆ.
ಗುಜರಾತ್ ರಾಜ್ಯದ ಅಂಗ ಸಂಸ್ಥೆಯಾಗಿರುವ ಗುಜರಾತ್ ರಾಜ್ಯ ಕೈಮಗ್ಗ ಮತ್ತು ಕರಕುಶಲ ಅಭಿವೃದ್ಧಿ ನಿಗಮದ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಪ್ರಾಂತೀಯ ಮೇಳವಾದ ಗರ್ವಿ ಗುರ್ಜರಿ ಹಸ್ತ ಕಲಾ ಮೇಳ ಹಲವು ವಿಶೇಷತೆ ಹೊಂದಿದೆ.
ಗುಜರಾತ್ ರಾಜ್ಯದ ವಿವಿಧ ಭಾಗಗಳ ಪ್ರಸಿದ್ಧ ಹಾಗೂ ಕ್ರಿಯಾಶೀಲರಾಗಿರುವ ಸುಮಾರು 30 ಕುಶಲಕರ್ಮಿಗಳು ಭಾಗವಹಿಸುತ್ತಿದ್ದಾರೆ. ಪಟೋಲ ಸೀರೆಗಳು, ಬಾಂದಿನಿ ಸೀರೆಗಳು, ಕಸೂತಿ ಮಾಡಿದ ಬೆಡ್ ಶೀಟ್‌ಗಳು, ಟವಲ್‌ಗಳು, ಕುಶನ್ ಕವರ್‌ಗಳು, ಪರಿಸರ ಸ್ನೇಹಿ ಆಭರಣಗಳು, ಡ್ರೆಸ್ ಮೆಟೀರಿಯಲ್‌ಗಳು, ಮಣ್ಣಿನಿಂದ ತಯಾರಿಸಿದ ವಸ್ತುಗಳು, ಬೀಡ್ ವರ್ಕ್, ಮೆಟಲ್ ವರ್ಕ್, ಕುರ್ತಿಗಳು, ಚನಿಯಾ ಚೋಲಿ, ಬಾಂದಿನಿ ಆಕರ್ಷಣೀಯ ಕರಕುಶಲ ಹಾಗೂ ಕೈಮಗ್ಗ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡುತ್ತಿದ್ದಾರೆ.
ತಯಾರಕರಿಂದ ನೇರವಾಗಿ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಒದಗಿಸುವ ಪ್ರಯತ್ನವನ್ನು ಗುಜರಾತ್ ಸರ್ಕಾರ ಮಾಡುತ್ತಿದೆ. ಈ ಕಾರಣದಿಂದಾಗಿ ಮೈಸೂರು ಹಾಗೂ ಸುತ್ತಮುತ್ತಲಿನ ಗ್ರಾಹಕರಿಗೆ ಗುಜರಾತ್ ಸಂಸ್ಕೃತಿಯ ಉಡುಗೆ-ತೊಡುಗೆಗಳು ಮತ್ತು ಅಲಂಕಾರಿಕ ವಸ್ತುಗಳು ನೇರವಾಗಿ, ಉತ್ತಮ ಗುಣಮಟ್ಟದಲ್ಲಿ, ಕಡಿಮೆ ಬೆಲೆಗೆ ಸಿಗುತ್ತಿವೆ.
ಈ ಮೇಳಕ್ಕೆ ಪ್ರವೇಶ ಉಚಿತವಾಗಿದ್ದು, ನಗರ ಬಸ್ ನಿಲ್ದಾಣದಿಂದ ರೂಟ್ ನಂ.117/1ರ ಬಸ್‌ಗಳು ಅರ್ಬನ್ ಹಾತ್‌ಗೆ ಸಂಚರಿಸುತ್ತವೆ. ಮೇಳವು ಪ್ರತಿದಿನ ಬೆಳಗ್ಗೆ 10.30ರಿಂದ ರಾತ್ರಿ 9ರವರೆಗೆ ಇರುತ್ತದೆ.