

ಗಂಗಾವತಿ: ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಅಂಗವಿಕಲ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ವೈದ್ಯಕೀಯ ಶಿಬಿರ ಆಯೋಜಿಸಿದ್ದು, ಅವರಿಗೆ ಅಗತ್ಯವಿರುವ ಚಿಕಿತ್ಸೆ ಮತ್ತು ಸಲಕರಣೆ ಒದಗಿಸಲಾಗುವುದು ಎಂದು ಡಿಡಿಪಿಐ ಎಂ.ಎ.ರಡ್ಡೇರ್ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಆರೋಗ್ಯ, ಶಿಕ್ಷಣ ಮತ್ತು ಸಮನ್ವಯ ಶಿಕ್ಷಣ ಇಲಾಖೆಯಿಂದ ಸೋಮವಾರ ಆಯೋಜಿಸಿದ್ದ ತ್ರಿವಳಿ ತಾಲೂಕು ಮಟ್ಟದ ಅಂಗವಿಕಲ ಮಕ್ಕಳ ವೈದ್ಯಕೀಯ ಶಿಬಿರದಲ್ಲಿ ಮಾತನಾಡಿದರು. ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸುತ್ತಿದ್ದು, ಅಗತ್ಯಬಿದ್ದರೆ ಚಿಕಿತ್ಸೆ ಕೊಡಿಸಲಾಗುವುದು. ಮಕ್ಕಳ ಬಗ್ಗೆ ಪಾಲಕರು ಜಾಗ್ರತೆ ವಹಿಸಬೇಕೆಂದು ತಿಳಿಸಿದರು.
ಪ್ರಭಾರ ಬಿಇಒ ಸುರೇಶಗೌಡ ಮಾತನಾಡಿ, ಅಂಗವಿಕಲ ಮಕ್ಕಳಿಗೆಆಲ್ಮಿಕೋ ಸಂಸ್ಥೆಯಿಂದ ಅಗತ್ಯ ಸಲಕರಣೆ ಒದಗಿಸಲಾಗುವುದು ಎಂದರು. ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 400ಕ್ಕೂ ಹೆಚ್ಚು ಮಕ್ಕಳಿಗೆ ದೃಷ್ಟಿ, ಶ್ರವಣ, ದೈಹಿಕ ನೂನ್ಯತೆ, ಹೃದಯ ಸಂಬಂಧಿತ ಕಾಯಿಲೆ ತಪಾಸಿಸಿ ಚಿಕಿತ್ಸೆಗೆ ಸಲಹೆ ನೀಡಲಾಯಿತು. ಸಮನ್ವಯ ಶಿಕ್ಷಣಾಧಿಕಾರಿ ಮಂಜುನಾಥ, ಜಿಲ್ಲಾ ಉಪಸಮನ್ವಯಾಧಿಕಾರಿ ಉಮೇಶ ಪೂಜಾರ್, ವೈದ್ಯರಾದ ಡಾ.ಅವಿನಾಶ್, ಡಾ.ರಾಧಿಕಾ ಅರಳಿ, ಶಿಕ್ಷಕಿ ವಿಜಯಲಕ್ಷ್ಮೀ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಚಾಂದ್ ಪಾಷಾ, ಉಪವಿಭಾಗ ಆಸ್ಪತ್ರೆ ವೈದ್ಯರು ಮತ್ತು ಆಲ್ಮಿಕೋ ಸಂಸ್ಥೆ ಪ್ರತಿನಿಧಿಗಳು ಭಾಗವಹಿಸಿದ್ದರು.