

ಬಂಟ್ವಾಳ: ಕುರಿಯಾಳ ಗ್ರಾಮದ ದುರ್ಗಾನಗರದ ಅಂಗವಿಕಲೆ, ಬಂಟ್ವಾಳದ ಎಸ್‌ವಿಎಸ್ ಕಾಲೇಜಿನ ವಿದ್ಯಾರ್ಥಿನಿ ಭಾಗ್ಯಶ್ರೀ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 470 ಅಂಕ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಹುಟ್ಟಿನಿಂದಲೇ ಕಾಲಿನ ಬಲ ಕಳೆದುಕೊಂಡಿರುವ ಭಾಗ್ಯಶ್ರೀ, ಮರದ ಮಣೆಯನ್ನು ಅವಲಂಬಿಸಿ ಮನೆಯಲ್ಲಿ ಅಡ್ಡಾಡುತ್ತಾರೆ. ಶಾಲೆ ಕಾಲೇಜಿಗೆ ಹೋಗಬೇಕಾದರೆ ತಾಯಿ ರಾಜೀವಿ ಎತ್ತಿಕೊಂಡು ಹೋಗಬೇಕು. ತಂದೆ ಕೇಶವ ಮೂಲ್ಯ ಕೂಡ ಅಂಗವಿಕಲ.
ಎಂಡೋಪೀಡಿತನಿಗೆ ಪ್ರಥಮ ಶ್ರೇಣಿ: ಕಡಬ: ರೆಂಜಿಲಾಡಿ ಗ್ರಾಮದ ಎಂಡೋಪೀಡಿತ ವಿದ್ಯಾರ್ಥಿ, ಪಲ್ಲತಡ್ಕ ಭಾಸ್ಕರ ಗೌಡ - ರೇವತಿ ದಂಪತಿ ಪುತ್ರ ಮನೋಜ್ ಕುಮಾರ್ ಪಿಯುಸಿ ಕಲಾ ವಿಭಾಗದಲ್ಲಿ 360 ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಿವಿ, ಕೈ ಎಲುಬು ಸಮಸ್ಯೆಯಿಂದ ಬಳಲುತ್ತಿರುವ ಮನೋಜ್ ನಾಲ್ಕು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಶೇ.85ರಷ್ಟು ಎಂಡೋಪೀಡಿತರು. ಸೇವಾಭಾರತಿ ಮಂಗಳೂರು ವತಿಯಿಂದ ರಾಮಕುಂಜ ಕಾಜರುಕುಕ್ಕು ವಿದ್ಯಾಚೇತನಾ ವಿಶೇಷ ಮಕ್ಕಳ ಶಾಲೆಯಲ್ಲಿ ತರಬೇತಿ ಪಡೆದು ಹಳೆನೇರೆಂಕಿಯ ನಿಶ್ಮಿತಾ ಎಂಬುವರ ಸಹಾಯದಿಂದ ಉಪ್ಪಿನಂಗಡಿಯಲ್ಲಿ ಪರೀಕ್ಷೆ ಬರೆದಿದ್ದರು. ಶಿಕ್ಷಕರಾದ ಶಶಿಕಲಾ ನರಿಮೊಗರು, ಸವಿತಾ ಹಾಗೂ ಸಹನಾ ತರಬೇತಿ ನೀಡಿದ್ದರು.