ಗ್ರಾಮೀಣ ಅಂಗವಿಕಲರು ಸೌಲಭ್ಯ ಪಡೆದುಕೊಳ್ಳಲು ಸಲಹೆ

Anchatageri new
Published on

ಹುಬ್ಬಳ್ಳಿ : ಗ್ರಾಮೀಣ ಪ್ರದೇಶದ ಅಂಗವಿಕಲರು ಸರ್ಕಾರದ ಯಾವುದೇ ಸೌಲಭ್ಯಗಳಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಅಂಗವಿಕಲರ ಗ್ರಾಮಸಭೆ ಏರ್ಪಡಿಸಲಾಗಿದೆ ಎಂದು ತಾಲೂಕು ಪಂಚಾಯಿತಿ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಮಹಾಂತೇಶ ಕುರ್ತಕೋಟಿ ಹೇಳಿದರು.

ತಾಲೂಕಿನ ಅಂಚಟಗೇರಿ ಗ್ರಾಮ ಪಂಚಾಯಿತಿ ವತಿಯಿಂದ ಅಂಗವಿಕಲರಿಗೆ ಮಂಗಳವಾರ ಏರ್ಪಡಿಸಿದ್ದ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.

ಅಂಗವಿಕಲರಿಗೆ ಸಾಕಷ್ಟು ಸೌಲಭ್ಯಗಳಿವೆ. ಆದರೆ, ಗ್ರಾಮೀಣ ಪ್ರದೇಶದ ಅಂಗವಿಕಲರಿಗೆ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಹಾಗಾಗಿ, ಅಂಗವಿಕಲರಿಗೆ ಯೋಜನೆಗಳ ಬಗ್ಗೆ ತಿಳಿಸುವಂತಹ ಕೆಲಸ ಈ ಗ್ರಾಮಸಭೆಯಲ್ಲಿ ಮಾಡಲಾಗುತ್ತಿದೆ ಎಂದರು.

ಅಂಚಟಗೇರಿ ಗ್ರಾಮ ಪಂಚಾಯಿತಿ ಪಿಡಿಒ ಎಫ್.ಎಫ್. ಶಿರಗೇರಿ ಮಾತನಾಡಿ, ಅಂಗವಿಕಲರು ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಲು ಹಿಂಜರಿಕೆ ಪಡಬಾರದು. ಸರ್ಕಾರ ಯೋಜನೆಗಳನ್ನು ಜಾರಿಗೆ ತಂದಿರುವ ಉದ್ದೇಶವೇ ಸಾರ್ವಜನಿಕರು, ಅಂಗವಿಕಲರು ಸದುಪಯೋಗ ಪಡೆದುಕೊಳ್ಳಲು ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷ ಮಂಜುನಾಥ ಗಾಣಿಗೇರ, ಉಪಾಧ್ಯಕ್ಷೆ ಮಲ್ಲವ್ವ ಜಮ್ಯಾಳ, ಸದಸ್ಯರಾದ ಫಕ್ಕಿರವ್ವ ಸಾದರ, ಮಂಜುಳಾ ಮಾಳಗಿಮನಿ, ನಾಗನಗೌಡರ ಪಾಟೀಲ, ಭೀಮಪ್ಪ ನಾಗಪ್ಪ ವಾಲ್ಮೀಕಿ, ಸಹದೇವಪ್ಪ ದುರ್ಗಪ್ಪ ಮಾಳಗಿ, ವಿ.ಆರ್.ಡಬ್ಲ್ಯೂ ಮಲ್ಲಮ್ಮ ವಾಲ್ಮೀಕಿ, ಎಂ.ಬಿ.ಕೆ. ರಂಜಿತಾ ಶಿವಳ್ಳಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net