

ರವಿ ಬಿದನೂರು ಹೊಸನಗರ
ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಬೀಳುವ ತಾಲೂಕುಗಳಲ್ಲಿ ಒಂದಾದ, ಮಲೆನಾಡ ನಡುಮನೆ ಎಂತಲೇ ಬಿಂಬಿತವಾದ ಹೊಸನಗರ ತಾಲೂಕಿನಲ್ಲೂ ಬರದ ಛಾಯೆ ಆವರಿಸಿದೆ. ನಗರ, ಹುಂಚಾ, ಕಸಬಾ, ಕೆರೆಹಳ್ಳಿ ಸೇರಿದಂತೆ ನಾಲ್ಕೂ ಹೋಬಳಿಗಳಲ್ಲೂ ಮಳೆಯ ಕೊರತೆ ಕಂಡು ಬಂದಿದೆ.
ಜೂನ್ ಆರಂಭದಲ್ಲಿ ಮುಂಗಾರು ವಿಫಲವಾದರೂ, ಜುಲೈ ಆರಂಭದಿಂದ ಮಳೆ ಬಿರುಸು ಕಂಡಿತ್ತು. ಆದರೆ ಆಗಸ್ಟ್ ತಿಂಗಳಲ್ಲಿ ಮಳೆ ಮಾಯವಾಗಿ ಬಿಸಿಲ ಝಳ ಜೋರಾಗಿದೆ. ನೀರಿನ ಕೊರತೆ ಭತ್ತದ ಬೆಳೆಯ ಮೇಲೆ ತೀವ್ರ ಪರಿಣಾಮ ಉಂಟು ಮಾಡಿದೆ. ತಾಲೂಕಿನಲ್ಲಿ ಈವರ್ಷ 1,652 ಮಿಮೀ ಮಳೆಯಾಗಿದೆ. ಆದರೆ ವಾಡಿಕೆ ಮಳೆ 2,541 ಮಿಮೀ ಆಗಿದ್ದು 889 ಮಿಮೀ ಮಳೆ ಕೊರತೆ ಕಂಡು ಬಂದಿದೆ. ತಾಲೂಕಿನಾದ್ಯಂತ ಬಿಸಿಲು ಝಳ ಹೆಚ್ಚಾಗಿದ್ದು ರೈತರು ಆತಂಕಕ್ಕೆ ಈಡಾಗಿದ್ದಾರೆ.
ತಾಲೂಕಿನಲ್ಲಿ ಈ ಬಾರಿ 8,600 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿತ್ತು. ಈಗಾಗಲೇ 7,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಸಸಿಯ ನಾಟಿ ಕೂಡ ನಡೆದಿದೆ. ಆದರೆ ಗದ್ದೆಗಳಲ್ಲಿ ನೀರು ಒಣಗಿದ ಪರಿಣಾಮ ಬಹುತೇಕ ಕಡೆ ಇನ್ನೂ ನಾಟಿ ಆಗದೆ ಸಸಿ ಮುಡಿಗಳು ಅಲ್ಲೇ ಉಳಿಯುವಂತಾಗಿದೆ. ಇನ್ನು ನಾಟಿ ಮಾಡಿದ ಗದ್ದೆಗಳಲ್ಲಿ ನೀರು ಬತ್ತಿದ ಕಾರಣ ಭತ್ತದ ಸಸಿಗಳು ಒಣಗುತ್ತಿವೆ. ಇನ್ನು 500 ಹೆಕ್ಟೇರ್ ಪ್ರದೇಶದಲ್ಲಿ ಜೋಳ, 200 ಹೆಕ್ಟೇರ್‌ಮಲ್ಲಿ ಕಬ್ಬು ಬೆಳೆಯುವ ಗುರಿ ಇದೆ. ಈಗಾಗಲೇ 410 ಹೆಕ್ಟೇರ್‌ನಲ್ಲಿ ಜೋಳ ಬಿತ್ತನೆ ಮಾಡಲಾಗಿದೆ. 200 ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯಲಾಗುತ್ತಿದೆ.
ಆರ್ದ್ರಾ ಮಳೆ ಕೈಕೊಟ್ಟ ಕಾರಣ ಮುಂದಿನ ಮಳೆಗಳ ಬಗ್ಗೆ ರೈತರ ನಿರೀಕ್ಷೆ ಇತ್ತು. ಪುನರ್ವಸು ಮಳೆ ಅಬ್ಬರಿಸಿ ಒಂದಷ್ಟು ನೀರು ತಂದಿದೆ. ಆದರೆ ಬಹುನಿರೀಕ್ಷೆ ಇದ್ದ ಆಶ್ಲೇಷ ಮತ್ತು ಮಘಾ ಮಳೆ ಸಂಪೂರ್ಣ ವಿಫಲವಾಗಿದೆ. ಇದೀಗ ರೈತರ ದೃಷ್ಟಿ ಹುಬ್ಬೆ ಮಳೆಯ ಮೇಲೆ ನೆಟ್ಟಿದೆ.
ವರುಣನೇ ಜೀವಾಳ
ಈ ಭಾಗದಲ್ಲಿ ಬೆಳೆಯುವ ಎಲ್ಲ ಬೆಳೆಗಳಿಗೆ ಮಳೆಯೇ ಜೀವಾಳ. ಇಲ್ಲಿ ನೀರಾವರಿ ಪ್ರದೇಶಗಳು ಕಡಿಮೆ. ಮಳೆಯ ಮೇಲೆಯೇ ಕೃಷಿ ನಡೆಸುವ ರೈತರಿಗೆ ಈ ಬಾರಿಯ ಮಳೆಯ ಅಭಾವ ತೊಂದರೆಗೆ ಸಿಲುಕಿದೆ. ಅಲ್ಲದೇ ಬಯಲುಸೀಮೆಗೆ ಹೋಲಿಸಿದರೆ ಹೊಸನಗರದಲ್ಲಿ ತಾಲೂಕು ಭಾಗದಲ್ಲಿ ಇಳುವರಿ ಕಡಿಮೆ. ಆದರೆ ಈ ಬಾರಿ ಭತ್ತ ಮನೆಯ ಊಟಕ್ಕೂ ಸಿಗುವ ಸಾಧ್ಯತೆ ಕೂಡ ಕ್ಷೀಣವಾಗುತ್ತಿದೆ.
ಬರ ಘೋಷಣೆ ಅನಿವಾರ್ಯ
ತಾಲೂಕಿನಾದ್ಯಂತ ಮಳೆ ಕೊರತೆಯಾದ ಕಾರಣ ಈ ಬಾರಿಯ ಮಳೆಗಾಲದ ಬೆಳೆ ರೈತರ ಕೈಗೆಟಕುವ ಸಾಧ್ಯತೆ ಇಲ್ಲ. ಜುಲೈ ತಿಂಗಳಲ್ಲಿ ಭರವಸೆ ಮೂಡಿಸಿದ್ದ ಮಳೆ ಆಗಸ್ಟ್ ತಿಂಗಳ ಹೊತ್ತಲ್ಲಿ ಆತಂಕ ತರಿಸಿದೆ. ಕೆರೆಹಳ್ಳಿ, ಕಸಬಾ ಹೋಬಳಿಯಲ್ಲಿ ಮಳೆಯ ಕೊರತೆ ಇದ್ದರೂ ರೈತರನ್ನು ಅಷ್ಟಾಗಿ ಬಾಧಿಸಿದಂತೆ ಕಂಡು ಬಂದಿಲ್ಲ. ಆದರೆ ಮಳೆಯ ಹೋಬಳಿ ಎಂದೇ ಪ್ರಸಿದ್ಧಿ ಪಡೆದ ನಗರ ಹೋಬಳಿ ಮತ್ತು ಹುಂಚಾ ಹೋಬಳಿಯಲ್ಲಿ ಮಳೆಯ ಕೊರತೆ ರೈತರನ್ನು ಹೈರಣಾಗಿಸಿದೆ. ಹೀಗಾಗಿ ಮಲೆನಾಡ ನಡುಮನೆಯಲ್ಲೂ ಬರ ಘೋಷಣೆ ಮಾಡುವುದು ಅನಿವಾರ್ಯ ಆಗಿದೆ.ಈ ಭಾಗದಲ್ಲಿ ಜೂನ್‌ನಿಂದ ಮೂರು ತಿಂಗಳು ಮಳೆಯ ಆರ್ಭಟ ಇರುತ್ತದೆ. ಆದರೆ ಈ ಬಾರಿ ಮಳೆ ಹೋದ ಪುಟ್ಟ ಬಂದ ಪುಟ್ಟ ಎನ್ನುವಂತಾಗಿದೆ. ಕಳೆದ ವರ್ಷವೇ ಕುಡಿಯುವ ನೀರಿಗೆ ಬರ ಕಂಡು ಬಂದಿತ್ತು. ಈ ಬಾರಿ ಪರಿಸ್ಥಿತಿ ಇನ್ನು ಭೀಕರವಾಗುವ ಸಾಧ್ಯತೆ ಇದೆ. ಹೊಸನಗರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸುವ ಅಗತ್ಯವಿದೆ.ಅಂಕಿತ್ ಮೇಕೇರಿ, ರೈತ
ಹೊಸನಗರ ತಾಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಮುಸುಕಿನ ಜೋಳಕ್ಕೆ ನೀರಿನ ಕೊರತೆ ಕಂಡು ಬಂದಿದೆ. ಭತ್ತದ ಈಗಿನ ಸ್ಥಿತಿ ಪರವಾಗಿಲ್ಲ. ಆದರೆ ಮಳೆಯ ಅಭಾವ ಇದೇ ರೀತಿ ಮುಂದುವರೆದರೆ ಬೆಳೆಗೆ ಪ್ರತಿಕೂಲವಾಗುವ ಸಾಧ್ಯತೆ ಇದೆ. ಈಗಾಗಲೇ ತಾಲೂಕಿನಲ್ಲಿ ಬರದ ಸಮೀಕ್ಷೆ ನಡೆಸಲಾಗುತ್ತಿದೆ. ಈ ಬಗ್ಗೆ ಸೂಕ್ತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು.ಸಚಿನ್ ಹೆಗಡೆ, ಕೃಷಿ ಅಧಿಕಾರಿ