ಹ್ಯಾಂಡ್‌ಬಾಲ್‌ನಲ್ಲಿ ಜಿಲ್ಲೆಯ ಮಕ್ಕಳು ಚಾಂಪಿಯನ್: ಜೈಪುರದಲ್ಲಿ ನಡೆದ ರಾಷ್ಟ್ರೀಯ ಪಂದ್ಯಾವಳಿ

2
Published on

ಮಂಡ್ಯ: ರಾಜಸ್ಥಾನದ ಜೈಪುರದಲ್ಲಿ ಇಂಡಿಯನ್ ಅಮೆಚೂರ್ ಸ್ಪೋರ್ಟ್ಸ್ ಫೆಡರೇಷನ್‌ನಿಂದ ಜೂ.18ರಿಂದ ಮೂರು ದಿನ ಆಯೋಜಿಸಿದ್ದ ರಾಷ್ಟ್ರಮಟ್ಟದ ಹ್ಯಾಂಡ್‌ಬಾಲ್ ಪಂದ್ಯಾವಳಿಯಲ್ಲಿ ಜಿಲ್ಲೆಯ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ. ಬಾಲಕ ಹಾಗೂ ಬಾಲಕಿಯರು ಎರಡು ವಿಭಾಗದಲ್ಲಿಯೂ ಚಾಂಪಿಯನ್ ಆಗುವ ಮೂಲಕ ಕೀರ್ತಿ ತಂದಿದ್ದಾರೆ.

ಮಂಡ್ಯದ ವಿವಿಧ ಶಾಲೆ ಮತ್ತು ಕಾಲೇಜುಗಳ 17ರಿಂದ 19 ವರ್ಷದೊಳಗಿನ ಹಾಗೂ 19 ವರ್ಷ ಮೇಲ್ಪಟ್ಟ ಮಕ್ಕಳು ಟೂರ್ನಿಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ಕರ್ನಾಟಕದ ಬಾಲಕರು ರಾಜಸ್ಥಾನದ ವಿರುದ್ಧ 25-10 ಅಂಕಗಳಿಂದ ಹಾಗೂ ಬಾಲಕಿಯರು ಕೂಡ ರಾಜಸ್ಥಾನದ ಬಾಲಕಿಯರ ತಂಡದ ವಿರುದ್ಧ 12-2 ಅಂಕಗಳಿಂದ ಗೆಲುವು ಸಾಧಿಸಿದರು. ಜಿಲ್ಲೆಯಿಂದ 12 ಜನ ಬಾಲಕಿಯರು, 21 ಜನ ಬಾಲಕರು ಸೇರಿ ಒಟ್ಟು 33 ಜನ ಕ್ರೀಡಾಪಟುಗಳು ಕರ್ನಾಟಕವನ್ನು ಪ್ರತಿನಿಧಿಸಿದರು. ಮಂಡ್ಯದ ಪಿಇಎಸ್ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತರಬೇತುದಾರ ಡಾ.ಟಿ.ಕೆ.ರವಿ ಆವರು 2005ರಲ್ಲಿ ಸಂಜೀವಿನಿ ಸ್ಪೋರ್ಟ್ಸ್ ಹ್ಯಾಂಡ್‌ಬಾಲ್ ಕ್ಲಬ್ ಪ್ರಾರಂಭಿಸಿ ಆ ಮೂಲಕ ಜಿಲ್ಲೆಯ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ಈ ಕ್ಲಬ್‌ನ ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.

ಪಿಇಟಿ ಸಂಸ್ಥೆ ಅಧ್ಯಕ್ಷ ಕೆ.ಎಸ್.ವಿಜಯಾನಂದ ಅವರು ಹ್ಯಾಂಡ್‌ಬಾಲ್ ತರಬೇತಿಗೆ ಪ್ರೋತ್ಸಾಹ ನೀಡುತ್ತಿದ್ದು, ತಮ್ಮ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ನಿತ್ಯ ಅಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟಿರುತ್ತಾರೆ. ಇದರಿಂದಾಗಿ ಮಂಡ್ಯದ ಮಕ್ಕಳು ಜೈಪುರದಲ್ಲಿ ನಡೆದ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ತರಬೇತುದಾರ ಟಿ.ಕೆ.ರವಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net