ಇವಿಎಂ ವಿಷಯದಲ್ಲಿ ಕೈ ಕುತಂತ್ರ ರಾಜಕಾರಣ

K.S. Eshwarappa
Published on

ಶಿವಮೊಗ್ಗ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸಂದರ್ಭದಲ್ಲಿ ಇವಿಎಂಗಳು ಸರಿಯಿದ್ದವೇ? ಅವರ ಪುತ್ರ ಪ್ರಿಯಾಂಕ್ ಖರ್ಗೆ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದಾಗ ಇವಿಎಂಗಳಲ್ಲಿ ಸಮಸ್ಯೆ ಇರಲಿಲ್ಲವೇ? ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಖಾರವಾಗಿ ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಸಹಿಸಲು ಸಾಧ್ಯವಾಗದೆ ಇವಿಎಂ ವಿಷಯದಲ್ಲಿ ಕಾಂಗ್ರೆಸ್ ಕುತಂತ್ರ ರಾಜಕಾರಣ ಮಾಡುತ್ತಿದೆ. ಜನರು ಬುದ್ಧಿವಂತರಿದ್ದಾರೆ. ಜನರಿಗೆ ಈ ರಾಜಕಾರಣ ಅರ್ಥವಾಗುತ್ತದೆ. ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇವಿಎಂನಿಂದ ಸೋಲುಂಟಾಯಿತು ಎನ್ನುವ ಮಲ್ಲಿಕಾರ್ಜುನ ಖರ್ಗೆ ಅದರ ಹಿಂದಿನ ಚುನಾವಣೆಯಲ್ಲಿ ಇವಿಎಂನಿಂದಲೇ ಗೆದ್ದರೇ? ಒಮ್ಮೆ ಬಿಜೆಪಿ, ಇನ್ನೊಮ್ಮೆ ಕಾಂಗ್ರೆಸ್, ಕೆಲವೊಮ್ಮೆ ಅನ್ಯ ಪಕ್ಷ ಇಲ್ಲವೇ ಪಕ್ಷೇತರರು ಚುನಾವಣೆಯಲ್ಲಿ ಗೆಲ್ಲುತ್ತಾರೆ. ಸೋಲು-ಗೆಲುವು ಯಾರಿಗೂ ಶಾಶ್ವತವಲ್ಲ. ಜನರ ಗಮನ ಸೆಳೆಯಲು ಕಾಂಗ್ರೆಸ್ ಇವಿಎಂ ಮೇಲೆ ಆರೋಪ ಮಾಡುತ್ತಿದೆ ಎಂದರು.

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶೋತ್ಸವದ ಮೆರವಣಿಗೆ ಸಂದರ್ಭದಲ್ಲಿ ಉಂಟಾದ ಉದ್ವಿಗ್ನ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಕರ್ನಾಟಕವನ್ನು ಮುಸ್ಲಿಂ ರಾಜ್ಯವನ್ನಾಗಿ ಮಾಡುವುದು ಕಾಂಗ್ರೆಸ್ ಆಶಯವಾಗಿರಬಹುದು. ಸಂಕುಚಿತ ಮನೋಭಾವನೆಯ ಮುಸ್ಲಿಮರಿಗೆ ಕಾಂಗ್ರೆಸ್ ಪ್ರೋತ್ಸಾಹ ನೀಡುತ್ತಿದೆ. ಹೀಗಾಗಿ ಹಿಂದುಗಳ ಮೇಲೆ ಹಲ್ಲೆ ನಡೆಸಲು ಮುಸ್ಲಿಮರಿಗೆ ಪ್ರಚೋದನೆ ಸಿಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕೆಲ ಮುಸ್ಲಿಮರು ಗೂಂಡಾಗಿರಿ ಮಾಡುತ್ತಿದ್ದರೂ ರಾಜ್ಯ ಸರ್ಕಾರ ಕ್ರಮ ಜರುಗಿಸುತ್ತಿಲ್ಲ. ಮಂಡ್ಯ ಜಿಲ್ಲೆ ಮದ್ದೂರು ಗಣೇಶ ವಿಸರ್ಜನೆ ವೇಳೆ ಮುಸ್ಲಿಮರು ಕಲ್ಲು ತೂರಿದ್ದರೂ ಹಿಂದುಗಳನ್ನು ಬಂಧಿಸಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ನಾಲ್ಕು ಜನ ಚಾಕು ಇರಿದರೂ ಕ್ರಮ ಕೈಗೊಂಡಿಲ್ಲ. ಸಾಗರದಲ್ಲಿ ಗಣಪತಿ ಮೆರವಣಿಗೆ ಮೇಲೆ ಬಾಲಕರು ಉಗುಳಿದ್ದರೂ ಕಾನೂನು ಕ್ರಮ ಕೈಗೊಳ್ಳಲಿಲ್ಲ. ಮುಸ್ಲಿಮರ ಮೆರವಣಿಗೆ ವೇಳೆ ಬೇರೊಬ್ಬರು ಅಡ್ಡ ಹೋದರೆ ಅವರು ಬಿಡುತ್ತಾರೆಯೇ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net