ಸುಸ್ಥಿತಿಯಲ್ಲಿರುವ ನೀರಿನ ಘಟಕ ಹಸ್ತಾಂತರಿಸಿ

Hanagal Srinivas Mane
Published on

ಹಾನಗಲ್ಲ: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸುಸ್ಥಿತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆಯಾ ವ್ಯಾಪ್ತಿಯ ಗ್ರಾಪಂಗಳಿಗೆ ಹಸ್ತಾಂತರಿಸಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಅವರು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸಿ.ಎಸ್. ನೆಗಳೂರ ಅವರಿಗೆ ಸೂಚಿಸಿದರು.

ಪಟ್ಟಣದ ಕಚೇರಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿ ಕುರಿತು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಮತ್ತು ಘಟಕಗಳ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಗುತ್ತಿಗೆದಾರರೊಂದಿಗೆ ಶುಕ್ರವಾರ ಅವರು ಸಭೆ ನಡೆಸಿದರು. ಘಟಕಗಳ ಸ್ಥಿತಿಗತಿ ಕುರಿತು ಹಲವು ಬಾರಿ ಮಾಹಿತಿ ಕೇಳಿದರೂ ಸಮರ್ಪಕವಾಗಿ ನೀಡುತ್ತಿಲ್ಲ. ವಾಸ್ತವದಲ್ಲಿ ಬೆರಳೆಣಿಕೆಯಷ್ಟು ಘಟಕಗಳು ಮಾತ್ರ ಸುಸ್ಥಿತಿಯಲ್ಲಿವೆ. ನಿತ್ಯವೂ ಈ ಕುರಿತು ಸಾರ್ವಜನಿಕರು ದೂರು ನೀಡುತ್ತಿದ್ದರೂ, ಏಕೆ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನೆರಡು ದಿನಗಳಲ್ಲಿ ಸುಸ್ಥಿತಿಯಲ್ಲಿರುವ ಘಟಕಗಳ ಕುರಿತು ಮಾಹಿತಿ ಕೊಡಿ. ದುರಸ್ತಿಗೀಡಾಗಿರುವ ಘಟಕಗಳನ್ನು ಸುಸ್ಥಿತಿಗೆ ತಂದು, ನಂತರ ತಾಲೂಕಿನಲ್ಲಿರುವ ಎಲ್ಲ 119 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಗ್ರಾಪಂಗಳಿಗೆ ಹಸ್ತಾಂತರಿಸಿ. ಗ್ರಾಮ ಪಂಚಾಯಿತಿಗಳು ಮುಂದೆ ಇವುಗಳ ನಿರ್ವಹಣೆ ಕೈಗೊಳ್ಳಬೇಕು ಎಂದು ಸೂಚಿಸಿದರು.

ಘಟಕಗಳನ್ನು ನಿರ್ವಹಿಸುವಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದ್ದು, ಇದರಿಂದ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ತೀವ್ರ ಹಿನ್ನಡೆ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇಲಾಖೆಯ ಲೆಕ್ಕ ಅಧೀಕ್ಷಕ ಎಂ.ಬಿ. ಪಾಟೀಲ, ಗುತ್ತಿಗೆದಾರ ನಿಸಾರ ಪಾನವಾಲೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net