ಭೂಮಿಯನ್ನು ಶೀಘ್ರ ನಗರಸಭೆಗೆ ಹಸ್ತಾಂತರಿಸಿ

ಭೂಮಿಯನ್ನು ಶೀಘ್ರ ನಗರಸಭೆಗೆ ಹಸ್ತಾಂತರಿಸಿ
Published on

ಹುಣಸೂರು: ಹುಣಸೂರು ನಗರಸಭೆಯಲ್ಲಿ ಕರ್ತವ್ಯದಲ್ಲಿರುವ 41 ಕಾಯಂ ಪೌರಕಾರ್ಮಿಕರಿಗೆ ನಗರವ್ಯಾಪ್ತಿಯ ಸರ್ವೇ ನಂ.75ರಲ್ಲಿ ತಾಲೂಕು ಆಡಳಿತ ಗುರುತಿಸಿರುವ 1 ಎಕರೆ ಭೂಮಿಯನ್ನು ಶೀಘ್ರ ನಗರಸಭೆಗೆ ಹಸ್ತಾಂತರಿಸಲು ಉಪವಿಭಾಗಾಧಿಕಾರಿ ಎಚ್.ಬಿ.ವಿಜಯಕುಮಾರ್ ಸೂಚಿಸಿದರು.

ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಸ್ತುತ ಸಾಲಿನ ಎರಡನೇ ತ್ರೈಮಾಸಿಕ ಸಫಾಯಿ ಕರ್ಮಚಾರಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾಯಂ ಪೌರಕಾರ್ಮಿಕರಿಗೆ ಅನುಕೂಲವಾಗುವಂತೆ ಪೌರಕಾರ್ಮಿಕ ಬಡಾವಣೆ ನಿರ್ಮಾಣವಾಗಬೇಕಿದೆ. ನಗರಸಭೆಯಲ್ಲಿ ಬಡಾವಣೆ ಅಭಿವೃದ್ಧಿಗಾಗಿ 96 ಲಕ್ಷ ರೂ. ಮೀಸಲಿಡಲಾಗಿದೆ. ಕಂದಾಯ ಇಲಾಖೆ ಸರ್ವೇ ನಂ.75ರಲ್ಲಿ ಈಗಾಗಲೇ ಗುರುತಿಸಿರುವ ಭೂಮಿಯನ್ನು ಶೀಘ್ರ ನಗರಸಭೆಗೆ ಹಸ್ತಾಂತರಿಸಿದಲ್ಲಿ ವಿವಿಧ ವಸತಿ ಯೋಜನೆಯಡಿ ಪೌರಕಾರ್ಮಿಕರಿಗೆ ವಸತಿ ಸೌಲಭ್ಯ ನೀಡಲು ಅವಕಾಶವಾಗಲಿದೆ. ಈ ನಿಟ್ಟಿನಲ್ಲಿ ಶೀಘ್ರ ಉಪಕ್ರಮಗಳನ್ನು ಕೈಗೊಳ್ಳಿ ಎಂದು ತಹಸೀಲ್ದಾರ್ ಜೆ.ಮಂಜುನಾಥ್ ಅವರಿಗೆ ಸೂಚಿಸಿದರು.

ವಸತಿ ಶಾಲೆಗಳಲ್ಲಿ ಅವಕಾಶ ಕಲ್ಪಿಸಿ: ಸಮಿತಿ ಸದಸ್ಯ ಲಕ್ಷ್ಮಣ್ ಮಾತನಾಡಿ, ರಾಜ್ಯ ಸರ್ಕಾರದ ಮೇಲುಸ್ತುವಾರಿಯಲ್ಲಿ ನಡೆಯುತ್ತಿರುವ ಆದರ್ಶ ವಿದ್ಯಾಲಯ, ಮುರಾರ್ಜಿ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಲ್ಲಿ ಪೌರಕಾರ್ಮಿಕ ಮಕ್ಕಳಿಗೆ ನೇರ ಅವಕಾಶ ನೀಡಬೇಕು. ನಮ್ಮ ಮಕ್ಕಳಿಗೂ ಉನ್ನತ ವಿದ್ಯಾಭ್ಯಾಸ ನೀಡಬೇಕೆಂಬ ಮಹದಾಸೆ ನಮ್ಮದಾಗಿರುತ್ತದೆ. ಆದರೆ, ಅವಕಾಶಗಳ ಕೊರತೆ ಕಾಡುತ್ತಿದೆ. ಪ್ರವೇಶಾತಿ ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾಗುವವರ ಸಂಖ್ಯೆ ನಮ್ಮಲ್ಲಿ ವಿರಳವಾಗಿದ್ದು, ಸರ್ಕಾರ ಕೆಲ ಪ್ರತಿಶತ ಮೀಸಲು ಇಡುವ ಮೂಲಕ ಅನುಕೂಲ ಮಾಡಿಕೊಡಬೇಕೆಂದು ಕೋರಿದರು. ಇದಕ್ಕುತ್ತರಿಸಿದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್‌ಕುಮಾರ್, ಶೇ.20 ರಷ್ಟು ಪ್ರವೇಶಾತಿ ಈ ರೀತಿ ಪ್ರಕರಣಗಳಿಗೆ ಕಾಯ್ದಿರಿಸಿದ್ದು, 7 ರಿಂದ 9ನೇ ತರಗತಿವರಗೆ ಪ್ರವೇಶ ಕಲ್ಪಿಸಬಹುದು ಎಂದು ಸಭೆಗೆ ತಿಳಿಸಿದರು.

ಸಾರಿಗೆ ಇಲಾಖೆ ಬಸ್ ನಿಲ್ದಾಣದ ಶೌಚಗೃಹ ನಿರ್ವಹಣೆಗೆ ನಿಯೋಜಿಸಿರುವ ಪೌರಕಾರ್ಮಿಕರಿಗೆ ಅವೈಜ್ಞಾನಿಕ ವೇತನ ನೀಡುತ್ತಿದ್ದಾರೆ. ಸಿಬ್ಬಂದಿಗೆ ಇಎಸ್‌ಐ, ಪಿಎಫ್ ಯೋಜನೆಗಳಿಲ್ಲ ಎಂದು ಗಮನ ಸೆಳೆದರು. ಈ ಸಂಬಂಧ ಸಾರಿಗೆ ಇಲಾಖೆ ಅಧಿಕಾರಿ ಉತ್ತರಿಸಿ ಟೆಂಡರ್ ಮೂಲಕ ಶೌಚಗೃಹ ನಿರ್ವಹಣೆಗೆ ಸಿಬ್ಬಂದಿ ನಿಯೋಜನೆ ಆಗುತ್ತಿದ್ದು, ಸ್ಥಳೀಯ ಡಿಪೋ ವ್ಯಾಪ್ತಿಗೆ ಬರುವುದಿಲ್ಲ ಎಂದರು.

ಉಪವಿಭಾಗಾಧಿಕಾರಿ ಉತ್ತರಿಸಿ ಈ ಸಂಬಂಧ ಸಾರಿಗೆ ವಿಭಾಗ ಅಧಿಕಾರಿ ಮತ್ತು ಕಾರ್ಮಿಕ ಇಲಾಖೆ ಉಪವಿಭಾಗಾಧಿಕಾರಿಗೆ ಪತ್ರ ಬರೆದು ಮಾಹಿತಿ ಸಂಗ್ರಹಿಸಿ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಸೂಚಿಸಿದರು.

ಮಂಜೂರಾತಿ ವಜಾಗೊಳಿಸಲಾಗುವುದು: ಪೌರಕಾರ್ಮಿಕ ಮಹಿಳೆ ಜಾನಕಮ್ಮ ಅವರ 8 ಎಕರೆ ಕೃಷಿ ಭೂಮಿಗೆ ಹೋಗಲು ಇತರ ಸಮುದಾಯದವರು ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಕ್ರಮವಹಿಸಬೇಕು ಎಂದು ಸಮಿತಿ ಸದಸ್ಯ ಲಕ್ಷ್ಮಣ್ ಒತ್ತಾಯಿಸಿದರು. ಈ ಸಂಬಂಧ ಹಲವು ಸಭೆಯಲ್ಲಿ ಚರ್ಚೆ ನಡೆದಿದೆ, ಇತರ ಸಮುದಾಯದವರಿಗೂ ಸರ್ಕಾರಿ ಭೂಮಿ ಮಂಜೂರಾಗಿದ್ದು, ರಸ್ತೆ ನಿರ್ಮಿಸಲು ಅವಕಾಶ ನೀಡದಿದ್ದರೆ, ಅವರಿಗೆ ಸರ್ಕಾರ ನೀಡಿರುವ ಮಂಜೂರಾತಿಯನ್ನೇ ವಜಾಗೊಳಿಸುವುದಾಗಿ ನೋಟಿಸ್ ಜಾರಿಗೊಳಿಸಿ ಎಂದು ಉಪವಿಭಾಗಾಧಿಕಾರಿ ವಿಜಯಕುಮಾರ್ ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಜೆ,ಮಂಜುನಾಥ್, ನರಗುಂದ, ಪೌರಾಯುಕ್ತೆ ಕೆ.ಮಾನಸ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net