ಪೆನ್‌ಡ್ರೈವ್ ಪ್ರಕರಣ ಸಿಬಿಐ ತನಿಖೆಗೆ ವಹಿಸಿ

13 mlv 1
ಮಳವಳ್ಳಿ ಪಟ್ಟಣದಲ್ಲಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಮಾಜಿ ಶಾಸಕ ಡಾ.ಕೆ.ಅನ್ನದಾನಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಜಯರಾಮು, ಡಿ.ರಮೇಶ್, ಸಿದ್ದಾಚಾರಿ, ಕಂಸಾಗರ ರವಿ, ವಿ.ಎಂ.ವಿಶ್ವನಾಥ್, ಚಂದಳ್ಳಿ ಶ್ರೀಧರ್, ಕಾಂತರಾಜು, ಸಿ.ಎಂ. ಪುಟ್ಟುಬುದ್ದಿ, ಟಿ.ನಂದಕುಮಾರ್, ಹನುಮಂತು, ಉಮಾ ಇದ್ದರು.
Published on

ಮಳವಳ್ಳಿ: ಪೆನ್‌ಡ್ರೈವ್ ಪ್ರಕರಣ ಸಂಬಂಧ ಸರ್ಕಾರ ರಚಿಸಿರುವ ಎಸ್‌ಐಟಿ ತನಿಖಾ ತಂಡವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ತಾಲೂಕು ಪಂಚಾಯಿತಿ ಬಳಿ ಜಮಾಯಿಸಿದ ನೂರಾರು ಕಾರ್ಯಕರ್ತರು, ಮೆರವಣಿಗೆಯಲ್ಲಿ ಸಾಗಿ ಅನಂತರಾಮ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು. ಈ ವೇಳೆ ಮೂಲಕ ಡಿಕೆಶಿ ಮತ್ತು ಎಲ್.ಆರ್.ಶಿವರಾಮೇಗೌಡ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪೆನ್‌ಡ್ರೈವ್ ಪ್ರಕರಣದಲ್ಲಿ ರಾಜ್ಯದ ಹೆಣ್ಣುಮಕ್ಕಳ ಮಾನವನ್ನು ಹರಣ ಮಾಡಿರುವುದರ ಜತೆಗೆ ಮಾಜಿ ಪ್ರಧಾನಿ ದೇವೇಗೌಡರಿಗೆ ಕಳಂಕ ತರಬೇಕೆಂಬ ದುರುದ್ದೇಶದಿಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಕೂಡಲೇ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಆಗ್ರಹಿಸಿದರು.

ಮಾಜಿ ಪ್ರಧಾನಿ ಎಚ್‌ಡಿಡಿ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌ಡಿಕೆ ಅವರನ್ನು ರಾಜಕೀವವಾಗಿ ಹಣಿಯಬೇಕೆಂಬ ಹುನ್ನಾರದಿಂದ ಕೆಲವರು ಕುತಂತ್ರ ಮಾಡುತ್ತಿದ್ದಾರೆ. ವ್ಯವಸ್ಥಿತ ಷಡ್ಯಂತ್ರ ಮೂಲಕ ಗೌಡರ ಕುಟುಂಬಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿರುವುದು ಈಗಾಗಲೇ ಎಲ್ಲರಿಗೂ ತಿಳಿದಿದ್ದು, ತಮ್ಮಿಷ್ಟದಂತೆ ತನಿಖೆ ನಡೆಸಲು ಎಸ್‌ಐಟಿ ರಚನೆ ಮಾಡಿ ತನಿಖೆಯ ಹಾದಿ ತಪ್ಪಿಸುತ್ತಿರುವುದು ಸ್ಪಷ್ಟವಾಗಿದೆ ಎಂದು ಕಿಡಿಕಾರಿದರು.

ಸಾವಿರಾರು ಪೆನ್‌ಡ್ರೈವ್‌ಗಳನ್ನು ಹಂಚಿರುವುದರ ಹಿಂದೆ ಡಿಕೆಶಿ ಹಾಗೂ ಎಲ್.ಆರ್.ಶಿವರಾಮೇಗೌಡ ಕೈವಾಡ ಇರುವುದು ಸ್ಪಷ್ಟ. ಇದನ್ನು ಬಹಿರಂಗಪಡಿಸಿದ ಬಿಜೆಪಿ ಮುಖಂಡ ದೇವರಾಜೇಗೌಡರನ್ನು ಬಂಧಿಸಲಾಗಿದೆ. ಕಾನೂನು ವ್ಯವಸ್ಥೆಯನ್ನೇ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಪ್ರಕರಣವನ್ನು ದಿಕ್ಕು ತಪ್ಪಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಕೂಡಲೇ ಈ ಪ್ರಕರಣವನ್ನು ನ್ಯಾಯಾಂಗ ಅಥವಾ ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಡಿಕೆಶಿ ಮತ್ತು ಎಲ್‌ಆರ್‌ಎಸ್ ಪ್ರತಿಕೃತಿಯನ್ನು ದಹಿಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷ ಡಿ.ಜಯರಾಮು, ಜಿಲ್ಲಾಧ್ಯಕ್ಷ ಡಿ.ರಮೇಶ್, ಉಪಾಧ್ಯಕ್ಷ ಸಿದ್ದಾಚಾರಿ, ಯುವ ಘಟಕದ ಅಧ್ಯಕ್ಷ ಕಂಸಾಗರ ರವಿ, ತಾಲೂಕು ಅಧ್ಯಕ್ಷ ವಿ.ಎಂ.ವಿಶ್ವನಾಥ್, ಯುವ ಘಟಕದ ಅಧ್ಯಕ್ಷ ಚಂದಳ್ಳಿ ಶ್ರೀಧರ್, ಎಸ್ಸಿ-ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷ ಬೆಳಕವಾಡಿ ಕಾಂತರಾಜು, ಕಾರ್ಯಾಧ್ಯಕ್ಷ ಸಿ.ಎಂ. ಪುಟ್ಟುಬುದ್ದಿ, ಪುರಸಭೆ ಸದಸ್ಯರಾದ ಟಿ.ನಂದಕುಮಾರ್, ಸಿದ್ದರಾಜು, ಜಯಸಿಂಹ, ನೂರುಲ್ಲಾ, ಜಿಪಂ ಮಾಜಿ ಸದಸ್ಯ ಹನುಮಂತು, ಬೆಳಕವಾಡಿ ಗ್ರಾಪಂ ಮಾಜಿ ಅಧ್ಯಕ್ಷೆ ಉಮಾ ಸೇರಿದಂತೆ ಇತರರಿದ್ದರು.

13 ಎಂಎಲ್ವಿ 2
ಪ್ರತಿಭಟನೆಯಲ್ಲಿ ಜೆಡಿಎಸ್- ಬಿಜೆಪಿ ಕಾರ್ಯಕರ್ತರು ಡಿಕೆಶಿ-ಎಲ್.ಆರ್.ಎಸ್ ಪ್ರತಿಕೃತಿ ದಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net