ಬೆನಕ ಆಸ್ಪತ್ರೆಯಲ್ಲಿ ಕೈ ಮೈಕ್ರೋ ಸರ್ಜರಿ : ಡಾ.ರೋಹಿತ್ ಜಿ.ಭಟ್ ಸೇವೆಗೆ ಸೇರ್ಪಡೆ

New Project (10)
Published on

ಬೆಳ್ತಂಗಡಿ: ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಕೈ ಮತ್ತು ಸೂಕ್ಷ್ಮಶಸ್ತ್ರಚಿಕಿತ್ಸೆಯಲ್ಲಿ ಫೆಲೋಶಿಪ್ ಪಡೆದಿರುವ ಮೂಳೆ ಶಸ್ತ್ರಚಿಕಿತ್ಸಕ ಡಾ. ರೋಹಿತ್ ಜಿ.ಭಟ್ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಸೇವೆಗೆ ಸೇರ್ಪಡೆಗೊಂಡರು.

ಡಾ.ರೋಹಿತ್ ಮಾತನಾಡಿ, ಕೈ ಮತ್ತು ಮೈಕ್ರೋ ಸರ್ಜರಿ ಫೆಲೋಶಿಪ್ ಎನ್ನುವುದು ಕೈ ಮತ್ತು ಕೈಬೆರಳಿನ ತುದಿಗಳ ರೋಗ ನಿರ್ಣಯ, ಚಿಕಿತ್ಸೆ ಮತ್ತು ಆರೈಕೆಯಲ್ಲಿ ವಿಶೇಷ ತರಬೇತಿ ಪಡೆಯುವುದಾಗಿರುತ್ತದೆ. ವೈದ್ಯರು ಮೈಕ್ರೋಸರ್ಜರಿ, ನರಗಳ ರಿಪೇರಿ ಮತ್ತು ಕೈ ಪುನಃನಿರ್ಮಾಣ ಸೇರಿದಂತೆ ಹಲವಾರು ಶಸ್ತ್ರಚಿಕಿತ್ಸಾ ತಂತ್ರ ಕಲಿಯುತ್ತಾರೆ. ಕೈಯ ಶಸ್ತ್ರಚಿಕಿತ್ಸೆ ನಮ್ಮ ದೇಶದಲ್ಲಿ ವಿಶೇಷತೆಯಾಗಿದೆ ಎಂದರು.

ಮೂಳೆ ಶಸ್ತ್ರಚಿಕಿತ್ಸಕ ಡಾ.ಶಶಿಕಾಂತ ಡೋಂಗ್ರೆ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ವಿಶೇಷ ಪರಿಣತಿ ಪಡೆದ ವೈದ್ಯರ ಸೇವೆ ಅತಿ ಅಗತ್ಯ. ಡಾ.ರೋಹಿತ್ ಗ್ರಾಮೀಣ ಪ್ರದೇಶದಲ್ಲಿ ಸೇವೆ ನೀಡಲು ನಿರ್ಧರಿಸಿದ್ದು ಅಭಿನಂದನೀಯ ಎಂದರು.

ತುರ್ತು ಚಿಕಿತ್ಸಾ ವೈದ್ಯ ಡಾ.ಆದಿತ್ಯ ರಾವ್, ಮಕ್ಕಳ ತಜ್ಞ ಡಾ.ಗೋವಿಂದ ಕಿಶೋರ್, ಸ್ತ್ರೀ ರೋಗ ತಜ್ಞೆ ಡಾ.ಅಂಕಿತಾ ಜಿ.ಭಟ್, ಆಸ್ಪತ್ರೆಯ ಮ್ಯಾನೇಜರ್ ದೇವಸ್ಯ, ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಜಿ.ಭಟ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಬೆನಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲಕೃಷ್ಣ ಸ್ವಾಗತಿಸಿದರು. ಡಾ.ಭಾರತಿ ವಂದಿಸಿದರು.

ಶಸ್ತ್ರಚಿಕಿತ್ಸೆಯಲ್ಲಿ ಫೆಲೋಶಿಪ್ ಪಡೆದವರು

ಉಜಿರೆಯ ಬೆನಕ ಆಸ್ಪತ್ರೆಯ ಡಾ.ಗೋಪಾಲಕೃಷ್ಣ ಹಾಗೂ ಡಾ.ಭಾರತಿ ದಂಪತಿ ಪುತ್ರ ಡಾ.ರೋಹಿತ್ ಜಿ.ಭಟ್ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದು, ರಾಜಸ್ಥಾನದ ಕೋಟಾದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಆರ್ಥೋಪೆಡಿಕ್ಸ್‌ನಲ್ಲಿ ಚಿನ್ನದ ಪದಕದೊಂದಿಗೆ ಎಂಎಸ್ ಪದವಿ ಪಡೆದಿರುವ ಪ್ರತಿಭಾನ್ವಿತ. ಬೆಂಗಳೂರಿನ ಅಪೋಲೋ ಹಾಸ್ಪಿಟಲ್‌ನಲ್ಲಿ ಹೆಸರಾಂತ ಕೈ ಮತ್ತು ಮೈಕ್ರೋಸರ್ಜನ್ ಡಾ.ದರ್ಶನ್ ಕುಮಾರ್ ಜೈನ್ ಅವರ ಮಾರ್ಗದರ್ಶನದಲ್ಲಿ ಇತ್ತೀಚೆಗೆ ಹ್ಯಾಂಡ್ ಮತ್ತು ಮೈಕ್ರೋ ಸರ್ಜರಿಯಲ್ಲಿ ಫೆಲೋಶಿಪ್ ಪೂರೈಸಿದ್ದಾರೆ.

ಗ್ರಾಮೀಣ ಭಾಗದ ಜನರಿಗೆ ಅನುಕೂಲ

ಬೆನಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲಕೃಷ್ಣ ಮಾತನಾಡಿ, ಕೈ ಮತ್ತು ಮಣಿಕಟ್ಟಿನ ಮೈಕ್ರೋಸರ್ಜರಿಯಲ್ಲಿ ಹೆಬ್ಬೆರಳು ಅಥವಾ ಬೆರಳು, ರಕ್ತನಾಳದ ತೀವ್ರವಾದ ಸೀಳುವಿಕೆ ಅಥವಾ ಗಂಭೀರ ಸ್ನಾಯುರಜ್ಜು ಅಥವಾ ನರಗಳ ಗಾಯದಂತಹ ಆಘಾತಕಾರಿ ಗಾಯಗಳನ್ನು ಗುಣಪಡಿಸಲಾಗುವುದು. ತೀವ್ರವಾಗಿ ಗಾಯಗೊಂಡ ಬೆರಳುಗಳು ಮತ್ತು ಮಣಿಕಟ್ಟುಗಳನ್ನು ರಕ್ಷಿಸುವ ಹಾಗೂ ಕೈ ಮತ್ತು ಬೆರಳಿನ ಪುನಃನಿರ್ಮಾಣ ಮಾಡುವ ಸೇವೆಯನ್ನು ಬೆನಕ ಆಸ್ಪತ್ರೆಯಲ್ಲಿ ಒದಗಿಸಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಮತ್ತು ಕಟ್ಟಡ ಕಾರ್ಮಿಕರಲ್ಲಿ ನಡೆಯುವ ಅಪಘಾತಗಳಲ್ಲಿ ಕೈಬೆರಳುಗಳು ಜಖಂ ಆಗುವುದು ಸಾಮಾನ್ಯ. ರಸ್ತೆ ಅಫಘಾತಗಳಲ್ಲಿಯೂ ಈ ರೀತಿಯ ಆಘಾತಗಳಾಗುತ್ತವೆ. ಶಸ್ತ್ರಚಿಕಿತ್ಸೆಯಿಂದ ಕೈ ಮತ್ತು ಬೆರಳುಗಳು ಮುಂಚಿನಂತೆಯೇ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net