ಕೈ ಹಿಡಿದ ಸಮಗ್ರ ಕೃಷಿ ಪದ್ಧತಿ

ಹುಣಸೂರು ತಾಲೂಕು ದೇವಗಳ್ಳಿಯ ವೀರರಾಜು ಅರಸ್ ಅವರ ತೋಟದಲ್ಲಿ ಮೆಣಸು ಬಳ್ಳಿ ಸಮೃದ್ಧವಾಗಿ ಬೆಳೆದಿರುವುದು.
ಹುಣಸೂರು ತಾಲೂಕು ದೇವಗಳ್ಳಿಯ ವೀರರಾಜು ಅರಸ್ ಅವರ ತೋಟದಲ್ಲಿ ಮೆಣಸು ಬಳ್ಳಿ ಸಮೃದ್ಧವಾಗಿ ಬೆಳೆದಿರುವುದು.
Published on

ಹುಣಸೂರು: ಬೇಸಾಯದಲ್ಲಿ ಸಮಗ್ರ ಕೃಷಿ ಪದ್ಧತಿ ಅನುಸರಿಸಿದಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎನ್ನುವ ಅಭಿಪ್ರಾಯ ಎಲ್ಲರದ್ದು. ಹೀಗಾಗಿ ಇಂತಹ ಪದ್ಧತಿಯನ್ನು ಹೆಚ್ಚಾಗಿ ಸಣ್ಣಪುಟ್ಟ ಹಿಡುವಳಿದಾರರು(2-3 ಎಕರೆ) ಅನುಸರಿಸುವುದು ವಾಡಿಕೆ. ಆದರೆ 15 ಎಕರೆ ಭೂಮಿ ಹೊಂದಿರುವ ರೈತರೊಬ್ಬರು ಸಮಗ್ರ ಕೃಷಿ ಪದ್ಧತಿ ಮೂಲಕ ತೋಟಗಾರಿಕಾ ಬೆಳೆಗಳನ್ನು ಬೆಳೆದು ಮಾದರಿಯಾಗಿದ್ದಾರೆ.

ತಾಲೂಕಿನ ಸಿಂಗರಮಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಗಳ್ಳಿಯ ವೀರರಾಜ ಅರಸ್ 15 ಎಕರೆ ಭೂಮಿಯಲ್ಲಿ ತೆಂಗು, ಅಡಕೆ, ಕಾಫಿ, ಮೆಣಸು, ಬಾಳೆ, ಸಿಲ್ವರ್ ಮರಗಳೊಂದಿಗೆ ಹೈನುಗಾರಿಕೆ, ಜೀವಾಮೃತ ತಯಾರಿಕೆ.. ಹೀಗೆ ಪರಿಸರ ಸ್ನೇಹಿಯೊಂದಿಗೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಯಶಸ್ವಿ ಕೃಷಿಕರಾಗಿ ಹೊರಹೊಮ್ಮಿದ್ದಾರೆ.

ವೀರರಾಜ ಅರಸ್ ತಂಬಾಕು ಬೆಳೆಯುವುದಿಲ್ಲ. ಆದರೆ ಅವರು ಬೆಳೆಯದ ತೋಟಗಾರಿಕಾ ಬೆಳೆಗಳಿಲ್ಲ. ಇತ್ತೀಚಿನ ದಿನಗಳಲ್ಲಿ ತರಕಾರಿ ಕೃಷಿ ತ್ಯಜಿಸಿದ್ದು, ಪ್ರಮುಖ ಬೆಳೆಗಳಲ್ಲಿ ಒಂದಾದ ತೆಂಗು ಕೃಷಿಯಲ್ಲಿ ನುಸಿರೋಗ, ಗರಿ ಕೊಳೆ ರೋಗಬಾಧೆಯಿಂದ ನೂರಾರು ತೆಂಗಿನ ಮರ ಕಳೆದುಕೊಂಡಿದ್ದರೂ ಅದರ ವ್ಯಾಮೋಹ ಮಾತ್ರ ಬಿಟ್ಟಿಲ್ಲ. ಈಗಲೂ ಅವರ ತೋಟದಲ್ಲಿ 400ಕ್ಕೂ ಹೆಚ್ಚು ತೆಂಗಿನ ಮರಗಳಿವೆ.

ಅಂತರ ಬೇಸಾಯ ಮೂಲಕ ಬೆಳೆ: ತೆಂಗಿನ ಮರದ ರೋಗಬಾಧೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ತೆಂಗಿನ ಗಿಡಗಳ ನಡುವೆ ಅಂತರ ಬೇಸಾಯದ ಮೂಲಕ 2 ಸಾವಿರ ಅಡಕೆ ಗಿಡಗಳನ್ನು ನೆಟ್ಟರು. ತಮ್ಮ ಭೂಮಿಯನ್ನು ಎರಡು ಪ್ಲಾಟ್ ಮಾಡಿಕೊಂಡು ಒಂದು ಪ್ಲಾಟ್‌ನಲ್ಲಿ ನಾಲ್ಕು ತೆಂಗಿನ ಮರದ ಮಧ್ಯೆ ಒಂದು ಸಪೋಟ ನೆಟ್ಟರೆ, ಮತ್ತೊಂದು ಫ್ಲಾಟ್‌ನಲ್ಲಿ ಎರಡು ತೆಂಗಿನ ನಡುವೆ ಎರಡು ಅಡಕೆ ಗಿಡ ನೆಟ್ಟಿದ್ದಾರೆ. 100ಕ್ಕೂ ಹೆಚ್ಚು ಸಪೋಟ ಮರಗಳು ಫಲ ನೀಡಲು ಆರಂಭಿಸಿವೆ. ಅಡಕೆ ಮರಗಳು ಕೂಡ ಫಲ ಬಿಡಲು ಆರಂಭಿಸಿದ್ದು, ಉತ್ತಮ ದರ ಸಿಗುತ್ತಿದೆ. ಈ ಹಿಂದೆ ಮೆಣಸು ಬಳ್ಳಿಗಳನ್ನು ಅಡಕೆ ಮರಕ್ಕೆ ಬಿಟ್ಟಿದ್ದರು. ಆದರೆ ಅಡಕೆ ಕಟಾವಿನ ಸಂದರ್ಭದಲ್ಲಿ ಮೆಣಸು ಬಳ್ಳಿಗೆ ತಾಗಿ ಮೆಣಸು ನಾಶವಾಗುತ್ತಿದ್ದುದ್ದನ್ನು ಗಮನಿಸಿ ಮೆಣಸು ಕೃಷಿ ಮುಂದುವರಿಸಲು ಜಮೀನಿನ ಬದುಗಳಲ್ಲಿ ಹಾಕಿದ್ದ 200ಕ್ಕೂ ಹೆಚ್ಚು ಸಿಲ್ವರ್ ಗಿಡಗಳಿಗೆ ಮೆಣಸು ಬಳ್ಳಿ ಹಬ್ಬಿಸಿದರು. ಇದೀಗ ಮೆಣಸು ಬಳ್ಳಿ ಸಂಪದ್ಭರಿತವಾಗಿ ಬೆಳೆದು ಫಸಲು ನೀಡುತ್ತಿದೆ.

ಒಂದೂವರೆ ಎಕರೆಯಲ್ಲಿ 3 ಸಾವಿರ ಕಾಫಿಗಿಡ: ಕೊಡಗು, ಮಲೆನಾಡಿನಲ್ಲಿ ಕಾಫಿ ತೋಟ ಸಾಮಾನ್ಯ. ಆದರೆ ಅರೆಮಲೆನಾಡು ಪ್ರದೇಶವಾದ ಮೈಸೂರು ಭಾಗದಲ್ಲೂ ಕಾಫಿ ಬೆಳೆಯಬಹುದೆನ್ನುವುದನ್ನು ವೀರರಾಜು ತೋರಿಸಿಕೊಟ್ಟಿದ್ದಾರೆ. ಒಂದೂವರೆ ಎಕರೆ ಭೂಮಿಯಲ್ಲಿ ಪೊಗದಸ್ತಾಗಿ 3 ಸಾವಿರ ಕಾಫಿ ಗಿಡ ನೆಟ್ಟಿದ್ದು, ಇದೀಗ ಗಿಡಗಳಲ್ಲಿ ಕಾಫಿ ಬೀಜಗಳು ಬೆಳೆಯಲು ಆರಂಭಿಸಿವೆ. ಇದರೊಂದಿಗೆ 1500 ವಿವಿಧ ಬಗೆಯ ಏಲಕ್ಕಿ, ನೇಂದ್ರ ಮತ್ತು ಪಚ್ಚಬಾಳೆ ಬೆಳೆದಿದ್ದಾರೆ. ತೋಟದಲ್ಲಿ ನಾಲ್ಕು ಬೋರ್‌ವೆಲ್‌ಗಳಿದ್ದು, ಹನಿ ನೀರಾವರಿಯೊಂದಿಗೆ ಸ್ಪ್ರಿಂಕ್ಲರ್ ಬಳಕೆ ಮಾಡುತ್ತಾರೆ.

ಜೀವಾಮೃತ ತಯಾರಿಕೆ: ಪ್ರತಿ ವರ್ಷ ಜೂನ್‌ನಲ್ಲಿ ಕೃಷಿ ಅಧಿಕಾರಿಗಳು ನೀಡುವ ಸಲಹೆಯಂತೆ ನಿಗದಿತ ಪ್ರಮಾಣಕ್ಕಿಂತ ಕಡಿಮೆಯಾಗಿ ರಾಸಾಯನಿಕ ಗೊಬ್ಬರ ಬಳಸುತ್ತಾರೆ. ನಂತರ ವರ್ಷವಿಡೀ ತಮ್ಮಲ್ಲೇ ತಯಾರಿಸುವ ಜೀವಾಮೃತ, ಹೊರಗಿನಿಂದ ಖರೀದಿಸುವ ಸಗಣಿ ಗೊಬ್ಬರಗಳನ್ನು ಬಳಸುತ್ತಾರೆ. ಹಾಗಾಗಿ ಭೂಮಿಯ ಫಲವತ್ತತೆ ಉತ್ತಮವಾಗಿದ್ದು, ಯಾವುದೇ ಬೆಳೆ ಬೆಳೆದರೂ ಉತ್ತಮ ಇಳುವರಿ ದೊರಕುತ್ತಿದೆ. ಮೇಲಾಗಿ 10ಕ್ಕೂ ಹೆಚ್ಚು ನಾಟಿ ಹಸುಗಳನ್ನು ಸಾಕುತ್ತಿದ್ದು, ಹೈನುಗಾರಿಕೆಯ ಮೂಲಕ ಆರ್ಥಿಕ ಬೆಂಬಲ ಪಡೆಯುತ್ತಿದ್ದಾರೆ.

ಲಕ್ಷ್ಮೀ ಒಲಿಯುತ್ತಾಳೆ: ಸಮಗ್ರ ಕೃಷಿ ಪದ್ಧತಿ ಎಲ್ಲ ರೀತಿಯಲ್ಲೂ ಅನುಕೂಲ. ಸರ್ಕಾರಿ ಉದ್ಯೋಗಿಗಳು ಪ್ರತಿ ತಿಂಗಳು ಪಡೆಯುವ ವೇತನದಂತೆ ಸಮಗ್ರ ಕೃಷಿ ಪದ್ಧತಿಯಲ್ಲೂ ರೈತರಿಗೆ ಹಣ ಸಿಗುತ್ತದೆ. ವೀರರಾಜು ಕೂಡ ಇದಕ್ಕೆ ಹೊರತಾಗಿಲ್ಲ. ಅಡಕೆ, ತೆಂಗು, ಕಾಫಿ, ಸಪೋಟ ಎಲ್ಲವೂ ವಾರ್ಷಿಕ ಬೆಳೆಗಳಾದರೂ ಪ್ರತಿ ಮೂರು ತಿಂಗಳಿಗೊಮ್ಮೆ ಒಂದಲ್ಲ ಒಂದು ಬೆಳೆ ಕಟಾವಿಗೆ ಬಂದಿರುತ್ತದೆ. ಮಾತ್ರವಲ್ಲ ಅಡಕೆ, ಕಾಫಿ ಮುಂತಾದವುಗಳನ್ನು 3 ತಿಂಗಳಿಗೊಮ್ಮೆ ಕಟಾವು ಮಾಡಲೇಬೇಕಾಗುತ್ತದೆ. ಹಾಗಾಗಿ ಒಂದಲ್ಲ ಒಂದು ಬೆಳೆಯಲ್ಲಿ ಹಣ ಚಲಾವಣೆಯಿದ್ದು, ಆರ್ಥಿಕ ಬಲ ಹೆಚ್ಚಿಸುತ್ತ್ತದೆ.

ಕೂಲಿಯಾಳುಗಳ ಕೊರತೆ ನಡುವೆಯೂ ದೊಡ್ಡ ವಿಸ್ತೀರ್ಣದಲ್ಲಿ ಕೃಷಿ ಕಾರ್ಯವನ್ನು ವೀರರಾಜ ಕುಟುಂಬ ಮುಂದುವರಿಸಿಕೊಂಡು ಬಂದಿದೆ. ವೀರರಾಜು ಅವರ ಪತ್ನಿ, ಪುತ್ರ ಶಶಿ, ಸೊಸೆ ಹಾಗೂ ಶಶಿ ಅವರ ಮೂವರು ಪುತ್ರರೂ ಕೃಷಿ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಎಲ್ಲರೂ ಒಟ್ಟಾಗಿ ದುಡಿದಲ್ಲಿ ಮಾತ್ರ ಕೃಷಿ ಸಾಧ್ಯ. ಭೂಮಿಯನ್ನು ನಂಬಿ ದುಡಿದರೆ ಮೋಸವಾಗುವುದಿಲ್ಲ ಎನ್ನುವುದು ಪುತ್ರ ಶಶಿ ಅಭಿಪ್ರಾಯ.

ನಾವು ಎಷ್ಟೇ ಯೋಚನೆ, ಯೋಜನೆ ಮಾಡಿ ಕೃಷಿ ಕಾರ್ಯ ಮಾಡಿದರೂ ರೈತರಿಗೆ ನಿರ್ದಿಷ್ಟ ದರ ಸಿಗುವುದರ ಕುರಿತು ಗ್ಯಾರಂಟಿ ಇಲ್ಲ. ಇದು ಒಂದು ರೀತಿಯ ಜೂಜಾಟ. ಎಲ್ಲಿಯವರೆಗೆ ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಇರುವುದಿಲ್ಲವೋ ಅಲ್ಲಿಯವರೆಗೂ ರೈತರ ಬವಣೆ ತಪ್ಪಿದ್ದಲ್ಲ. ಸಮಗ್ರ ಕೃಷಿ ಪದ್ಧತಿ ಮೂಲಕ ಒಂದಲ್ಲ ಒಂದು ಬೆಳೆಯಲ್ಲಿ ಲಾಭ ಗಳಿಸಬಹುದು. ಹಾಗಾಗಿ ಎಲ್ಲರೂ ಈ ರೀತಿಯ ಪದ್ಧತಿಯನ್ನು ಅನುಸರಿಸುವುದು ಒಳ್ಳೆಯದು. ಯುವಕರು ಕೃಷಿಯಿಂದ ವಿಮುಖರಾಗಬಾರದು.

ವೀರರಾಜ ಅರಸ್, ಕೃಷಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net