ಚೆನ್ನಂಗಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಕೈ ಮುರಿತ

Oplus_131072
Oplus_131072
Published on

ಸಿದ್ದಾಪುರ: ಚೆನ್ನಂಗಿ ಗ್ರಾಮದ ಬಸವನಳ್ಳಿ ಹಾಡಿಯಲ್ಲಿ ತಡರಾತ್ರಿ ಕಾಡಾನೆ ದಾಳಿ ಮಾಡಿದ ಪರಿಣಾಮ ಹಾಡಿಯ ನಿವಾಸಿ ಜೆ.ಎಚ್.ಅಪ್ಪಣ್ಣ ಅವರ ಕೈ ಮುರಿದಿದೆ.

ಗುರುವಾರ ಮನೆ ಮುಂಭಾಗದಲ್ಲಿ ಕಾಡಾನೆಗಳು ದಾಂಧಲೆ ನಡೆಸುತ್ತಿದ್ದವು. ಈ ಸಂದರ್ಭ ಮನೆ ಬಾಗಿಲು ತೆರೆದು ನೋಡುವಷ್ಟರಲ್ಲಿ ಕಾಡಾನೆ ಏಕಾಏಕಿ ಸೊಂಡಿಲಿನಿಂದ ಗುದ್ದಿದ ಪರಿಣಾಮ ಬಲಭಾಗದ ಕೈ ಮೂಳೆ ಸಂಪೂರ್ಣ ಮುರಿದಿದೆ.

ಅಪ್ಪಣ್ಣ ಕಿರುಚಿಕೊಂಡಾಗ ಕುಟುಂಬಸ್ಥರು ಬರುವಷ್ಟರಲ್ಲಿ ಆನೆಯೂ ಅಲ್ಲಿಂದ ಹೋಗಿದೆ. ನಂತರ ತಡರಾತ್ರಿ 2 ಗಂಟೆಯ ಸಮಯಕ್ಕೆ ಅಪ್ಪಣ್ಣನ ಮಗ ಮಹೇಶ್ ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ವಲಯ ಆರೋಗ್ಯ ಇಲಾಖಾಧಿಕಾರಿ ದೇವರಾಜ್ ಮಾರ್ಗದರ್ಶನದ ಮೇರೆಗೆ ಉಪ ವಲಯ ಅರಣ್ಯಾಧಿಕಾರಿ ಚೆನ್ನವೀರ್ ಹಾಗೂ ಚೆನ್ನಂಗಿ ವ್ಯಾಪ್ತಿಯ ಅರಣ್ಯ ರಕ್ಷಕ ಹಾಗೂ ವೀಕ್ಷಕ ತಿಮ್ಮಣ್ಣ, ಅರಣ್ಯ ಇಲಾಖೆಗೆ ಸೇರಿದ ಜೀಪಿನಲ್ಲೇ ಜಿಲ್ಲಾಸ್ಪತ್ರೆಗೆ ಗಾಯಾಳು ಅಪ್ಪಣ್ಣ ಅವರನ್ನು ಕರೆತಂದು ದಾಖಲಿಸಿದ್ದಾರೆ.

ವಿಷಯ ತಿಳಿದ ತಕ್ಷಣ ಮಡಿಕೇರಿ ಜಿಲ್ಲಾಸ್ಪತ್ರೆಗೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಭೇಟಿ ನೀಡಿ ಗಾಯಾಳುವಿನ ಯೋಗಕ್ಷೇಮ ವಿಚಾರಿಸಿದರು. ವೈದ್ಯರ ತಂಡದೊಂದಿಗೆ ಮಾತುಕತೆ ನಡೆಸಿ ಸೂಕ್ತ ಚಿಕಿತ್ಸೆ ನೀಡುವಂತೆ ಚರ್ಚಿಸಿದರು. ಬಲ ಕೈ ಮುರಿತವಾಗಿದ್ದು ಶಸ್ತ್ರ ಚಿಕಿತ್ಸೆ ನಡೆಯಲಿದೆ ಎಂದು ವೈದ್ಯರ ತಂಡ ತಿಳಿಸಿದೆ.

ಚೆನ್ನಂಗಿ ಬಸವನಹಳ್ಳಿ ವ್ಯಾಪ್ತಿಯಲ್ಲಿ ಕಾಡಾನೆ ಕಾರ್ಯಾಚರಣೆ ಕೈಗೊಳ್ಳುವಂತೆ ಮೇರಿಯಂಡ ಸಂಕೇತ್ ಪೂವಯ್ಯ ಸೂಚಿಸಿದ್ದು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆದ ವಿರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್. ಪೊನ್ನಣ್ಣ ಅವರೊಂದಿಗೆ ಈ ಬಗ್ಗೆ ಸಮಾಲೋಚನೆ ನಡೆಸಿದ ಸಂಕೇತ್ ಪೂವಯ್ಯ ಅವರು ಸರ್ಕಾರದಿಂದ ಗಾಯಾಳುವಿಗೆ ಸೂಕ್ತ ಪರಿಹಾರ ಹಾಗೂ ಕೂಡಲೇ ಕಾಡಾನೆ ಕಾರ್ಯಾಚರಣೆ ಮತ್ತು ಉನ್ನತ ಮಟ್ಟದ ಚಿಕಿತ್ಸೆಯನ್ನು ಗಾಯಾಳುವಿಗೆ ನೀಡುವಂತೆ ಅಧಿಕಾರಿಗಳಿಗೆ ಪೊನ್ನಣ್ಣ ಅವರು ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net