ಕೈ ಪಾಳಯ ಸೇರುವಂತೆ ಗಣ್ಯರಿಗೆ ಆಹ್ವಾನ

1414
Published on

ಗೋಕಾಕ: ಬೆಳಗಾವಿ ಲೋಕಸಭಾ ಉಪ ಚುನಾವಣೆ ದಿನಾಂಕ ಘೋಷಣೆಗೆ ಕ್ಷಣಗಣನೆ ಆರಂಭವಾಗಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಮಂಗಳವಾರ ಗೋಕಾಕನಲ್ಲಿ ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಅವರನ್ನು ಕಾಂಗ್ರೆಸ್ ಸೇರುವಂತೆ ಆಹ್ವಾನಿಸಿದ್ದಾರೆ. ನಂತರ ಮಹಾಂತೇಶ ತಾವಂಶಿ, ರಾಜು ಮುನ್ನೋಳಿ ಅವರನ್ನು ಸತೀಶ ಆಹ್ವಾನಿಸಿದರು.

ಯಾವುದೇ ಕ್ಷಣದಲ್ಲಿ ಚುನಾವಣಾ ದಿನಾಂಕ ಘೋಷಣೆ ಆಗಲಿದ್ದು, ಸತೀಶ ಅವರು ಅಶೋಕ ಪೂಜಾರಿ ಅವರನ್ನು ಮನೆಗೇ ಹೋಗಿ ಆಹ್ವಾನಿಸಿರುವುದು ಜಿಲ್ಲೆಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈಗಾಗಲೇ ಜಿಲ್ಲೆಯ ಹಲವು ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರಲು ಸತೀಶ ಸನ್ನದ್ಧರಾಗಿದ್ದಾರೆ. ಆ ನಿಟ್ಟಿನಲ್ಲಿ ಹಲವರಿಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಈ ವೇಳೆ ಮಾತನಾಡಿದ ಸತೀಶ, ಕಾಂಗ್ರೆಸ್‌ನ ತತ್ತ್ವ-ಸಿದ್ಧಾಂತ ಒಪ್ಪಿ ಬರಲಿರುವವರನ್ನು ಆಹ್ವಾನಿಲಾಗುತ್ತಿದೆ. ಪಕ್ಷಕ್ಕೆ ಬರುವುದು, ಬಿಡುವುದು ಅವರಿಗೆ ಬಿಟ್ಟಿರುವ ವಿಚಾರ. ಹಲವು ಮುಖಂಡರಿಗೆ ಆಹ್ವಾನ ನೀಡಲಾಗುತ್ತಿದೆ. ಕೆಲ ಮುಖಂಡರು ಸಮಯ ಕೇಳಿದ್ದಾರೆ.

ಅವರು ಕೈಗೊಳ್ಳುವ ತೀರ್ಮಾನದ ಬಳಿಕ ಮುಂದಿನ ಹೆಜ್ಜೆ ಇಡಲಾಗುತ್ತದೆ ಎಂದರು. ಅಶೋಕ ಅವರು ಈ ಹಿಂದೆ ಬಿಜೆಪಿಯಲ್ಲಿದ್ದರು. ಗೋಕಾಕ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಜೆಡಿಎಸ್ ಸೇರ್ಪಡೆಗೊಂಡು ಗೋಕಾಕ ವಿಧಾನಸಭಾ ಉಪಚುನಾವಣೆಗೆ ಸ್ಪರ್ಧಿಸಿದ್ದನ್ನು ಸ್ಮರಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net